August 23, 2026

ಅನಿಲಗೋಡ್ ಕಾಲುಸೇತುವೆ ಕುಸಿದು 2 ವರ್ಷ ಕಳೆದರೂ ಮರುನಿರ್ಮಾಣವಿಲ್ಲ: ನೂರಾರು ಗ್ರಾಮಸ್ಥರ ಸಂಕಷ್ಟ

ಹೊನ್ನಾವರ: ತಾಲೂಕಿನ ಅನಿಲಗೋಡ್ ಭಾಗದಲ್ಲಿ ಮಳೆಗಾಲದಲ್ಲಿ ಕುಸಿದು ಬಿದ್ದ ಕಾಲುಸೇತುವೆ ಎರಡು ವರ್ಷ ಕಳೆದರೂ ಮರುನಿರ್ಮಾಣವಾಗದೆ ಇರುವುದು ಸಾರ್ವಜನಿಕರ ತೀವ್ರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸೇತುವೆಯು ಅನಿಲಗೋಡ್ ಸೇರಿದಂತೆ ಹೆಗ್ಗಾರ, ಹೊನ್ನಾವರ ಹಾಗೂ ಬಳಕೂರ ಕಡೆಗೆ ಸಂಚರಿಸುವ ಸುಮಾರು 150ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಹಾಗೂ 200ಕ್ಕೂ ಹೆಚ್ಚು ಜನರಿಗೆ ಅತ್ಯಂತ ಪ್ರಮುಖ ಸಂಪರ್ಕ ಮಾರ್ಗವಾಗಿತ್ತು.

5 ಕಿ.ಮೀ. ಸುತ್ತುವರಿಯುವ ದುಸ್ಥಿತಿ:

ಸೇತುವೆ ಕುಸಿದ ನಂತರ ಗ್ರಾಮಸ್ಥರು ಕನಿಷ್ಠ 5 ಕಿಲೋಮೀಟರ್ ಸುತ್ತುವರಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದಿಂದ ಬೆಳಿಗ್ಗೆ 6 ಗಂಟೆಗೆ ಒಂದೇ ಬಸ್ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳು ಶಾಲೆ-ಕಾಲೇಜು ಆರಂಭಕ್ಕೂ 2 ಗಂಟೆ ಮುಂಚಿತವಾಗಿಯೇ ಹೊರಡಬೇಕಾಗಿದೆ. ಬಸ್ ತಪ್ಪಿದರೆ ₹80 ರಿಂದ ₹100 ವೆಚ್ಚ ಮಾಡಿ ಆಟೋದಲ್ಲಿ ಪ್ರಯಾಣಿಸುವುದು ಬಡ ಕುಟುಂಬಗಳಿಗೆ ಹೊರೆಯಾಗಿದೆ.

ಜನಸಂದರ್ಶನ ಕೇವಲ ಪ್ರಚಾರಕ್ಕಷ್ಟೇ?:

ಸ್ಥಳೀಯರು ಶಾಸಕ ಮಂಕಾಳು ವೈದ್ಯ ಅವರ ಸಚಿವ ಅವಧಿಯಲ್ಲೂ ಹಾಗೂ ವಿವಿಧ ಜನಸಂದರ್ಶನ ಕಾರ್ಯಕ್ರಮಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಶಾಶ್ವತ ಕ್ರಮವಾಗಿಲ್ಲ. “ಒಬ್ಬ ಶಾಸಕರಿಂದ ಆಗದ ಕೆಲಸವೇ ಇಲ್ಲ ಎಂದು ಹೇಳುವ ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸದಿರುವುದು ದುರಂತ. ಜನಸಂದರ್ಶನದಲ್ಲಿ ಸ್ವೀಕರಿಸುವ ಮನವಿಗಳು ಕೇವಲ ರಾಜಕೀಯ ಪ್ರಚಾರಕ್ಕಾಗಿ ಮಾತ್ರವೇ?” ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಮನವಿ:

ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಅನಿಲಗೋಡ್ ಗ್ರಾಮಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತಕ್ಷಣವೇ ಭೇಟಿ ನೀಡಿ ಪರಿಶೀಲಿಸಬೇಕು. ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಾಲುಸೇತುವೆಯನ್ನು ಆದಷ್ಟು ಶೀಘ್ರ ಮರುನಿರ್ಮಾಣ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಾದೇವಿ ಡಿ. ಅಂಬಿಗ, ದಾಮೋದರ ಡಿ. ಅಂಬಿಗ, ಗಜಾನನ ಎನ್. ನಾಯ್ಕ, ನರಸಿಂಹ ನಾಯ್ಕ, ಜನಾರ್ಧನ ನಾಯ್ಕ, ಸುರೇಶ್ ನಾಯ್ಕ, ಮಾದೇವ ನಾಯ್ಕ, ಮಂಜು ನಾಯ್ಕ, ಗಜಾನನ ನಾಯ್ಕ, ನಾರಾಯಣ ನಾಯ್ಕ, ವಿಷ್ಣು ನಾಯ್ಕ, ಕುಸುಮಾ ಅಂಬಿಗ, ಮುಕ್ತಾ ನಾಯ್ಕ, ಸುಶೀಲಾ ನಾಯ್ಕ, ಭಾಗೀರಥಿ ನಾಯ್ಕ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

About The Author

error: Content is protected !!