ಭಟ್ಕಳ: ತಾಲೂಕಿನ ಸೂಸಗಡಿ ಹೋಬಳಿಯ ಮಾರುಕೇರಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ‘ಪ್ರಜಾ ಸೇವೆ ಆಂದೋಲನ’ದಲ್ಲಿ ಸಾರ್ವಜನಿಕರು ರಸ್ತೆ, ಆರೋಗ್ಯ, ಸಾರಿಗೆ, ಶೈಕ್ಷಣಿಕ ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಹತ್ತಾರು ಸಮಸ್ಯೆಗಳ ಕುರಿತು ಅಧಿಕಾರಿಗಳ ಮುಂದೆ ಅಹವಾಲು ಸಲ್ಲಿಸಿದರು.

ಸಹಾಯಕ ಆಯುಕ್ತ ಜಿ. ಮಹೇಶ್ ಕಾರ್ಯಕ್ರಮ ಉದ್ಘಾಟಿಸಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿ ಸಮಾಲೋಚನೆ ನಡೆಸಿದರು.
ಗ್ರಾಮಸ್ಥರು ಮಂಡಿಸಿದ ಪ್ರಮುಖ ಸಮಸ್ಯೆಗಳು:
ರಸ್ತೆ ಹಾಗೂ ಸಾರಿಗೆ: ಜಲಜೀವನ ಮಿಷನ್ ಕಾಮಗಾರಿಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ, ಬಿಎಸ್ಎನ್ಎಲ್ ನೆಟ್ವರ್ಕ್ ಸುಧಾರಣೆ, ಕನಿಷ್ಠ ಗಂಟೆಗೊಮ್ಮೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವುದು ಹಾಗೂ ಅತ್ರೋಳಿ ಶಾಲೆಯನ್ನು ಪುನರಾರಂಭಿಸುವುದು.

ಆರೋಗ್ಯ ಸೇವೆ: ಕೋಣಾರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಸೇವೆಗಳ ಕೊರತೆ, ಆಶಾ ಕಾರ್ಯಕರ್ತೆಯರ ಅಭಾವ ಹಾಗೂ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಗತ್ಯ ಔಷಧ ಪೂರೈಕೆಗೆ ಒತ್ತಾಯ.
ಕಾಡುಪ್ರಾಣಿಗಳ ಹಾವಳಿ ಹಾಗೂ ಜಾತಿ ಪ್ರಮಾಣಪತ್ರ: ವನ್ಯಜೀವಿಗಳ ಹಾವಳಿ ತಡೆಯುವುದು ಮತ್ತು ಗೊಂಡ ಸಮುದಾಯದ ಜನರಿಗೆ ಕಳೆದ 8 ವರ್ಷಗಳಿಂದ ವಿಳಂಬವಾಗುತ್ತಿರುವ ಜಾತಿ ಪ್ರಮಾಣಪತ್ರಗಳನ್ನು ತಕ್ಷಣ ವಿತರಿಸುವುದು.
ಇತರ ಬೇಡಿಕೆಗಳು: ರುದ್ರಭೂಮಿಗೆ ಜಾಗ, ರದ್ದಾಗಿರುವ ಬಿಪಿಎಲ್ ಕಾರ್ಡ್ಗಳ ಮರುಪರಿಶೀಲನೆ, ಪಿಂಚಣಿ ವಿಳಂಬ ಪರಿಹಾರ ಹಾಗೂ ಕೊಟಖಂಡ ಶಾಲಾ ಕಟ್ಟಡ ದುರಸ್ತಿ.
ಅಧಿಕಾರಿಗಳ ಸ್ಪಷ್ಟನೆ: ಆಂದೋಲನದ ಕುರಿತು ತಡವಾಗಿ ಮಾಹಿತಿ ದೊರೆತ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿದ ಅಸಮಾಧಾನಕ್ಕೆ ಸ್ಪಂದಿಸಿದ ಸಹಾಯಕ ಆಯುಕ್ತರು, ನೀತಿ ಸಂಹಿತೆ ಕಾರಣದಿಂದ ವಿಳಂಬವಾಗಿದ್ದು, ಮುಂದಿನ ದಿನಗಳಲ್ಲಿ ಸಚಿವರ ಉಪಸ್ಥಿತಿಯಲ್ಲಿ ಮತ್ತೊಮ್ಮೆ ಬೃಹತ್ ಆಂದೋಲನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪ್ರವೀಣ್ ಕಾರಂಡೆ, ತಾಪಂ ಇಒ ಸುನೀಲ್ ಬಿ., ಬಿಇಒ ವೆಂಕಟೇಶ ನಾಯಕ, ಟಿಎಚ್ಒ ಡಾ. ಸನ್, ಆರ್ಎಫ್ಒ ವಿಶ್ವನಾಥ ನಾಯ್ಕ, ಪಿಡಿಒ ಉದಯ ಭೋರಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
About The Author


More Stories
ಮೈಸೂರು ದಸರಾ ಕ್ರೀಡಾಕೂಟ: ಕರಾಟೆಯಲ್ಲಿ ಕಂಚಿನ ಪದಕ ಗೆದ್ದ ಭಟ್ಕಳದ ಪ್ರವೀಣ್ ಹರಿಜನ್
ನಾಗ ಮಾಸ್ತಿ ಕ್ಷೇತ್ರದಲ್ಲಿ ವೈಭವದ ಮಹಿಳಾ ದಸರಾ; ಪ್ರತಿಭೆ ಅನಾವರಣಕ್ಕೆ ವೇದಿಕೆ
ನಾಗ ಮಾಸ್ತಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆಗೆ ಚಾಲನೆ; ಸನಾತನ ಸಂಸ್ಕೃತಿ ರಕ್ಷಣೆಗೆ ಒತ್ತು