ಗೋಕರ್ಣ: ದೇಶಿ ಗೋವಿನ ಎ2 ಹಾಲು ಮತ್ತು ತುಪ್ಪ ಶ್ರೇಷ್ಠ ಹಾಗೂ ಜೀರ್ಣಕ್ರಿಯೆಗೆ ಪೂರಕ ಎಂಬುದನ್ನು ಆಯುರ್ವೇದದ ಜೊತೆಗೆ ಆಧುನಿಕ ವಿಜ್ಞಾನವೂ ವಿಶ್ಲೇಷಿಸಿ ದೃಢೀಕರಿಸಿದೆ. ಮಿಶ್ರ ತಳಿಯ ಹಸುವಿನ ಹಾಲು ಅಹಿತ ಎಂದು ವಿಜ್ಞಾನ ಒಪ್ಪಿದ್ದರೂ, ಜಗತ್ತು ಹಣದ ಹಿಂದೆ ಓಡುತ್ತಿರುವುದರಿಂದ ಅದನ್ನು ಸ್ವೀಕರಿಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 26ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು.
ದೇಶಿ ತಳಿ ತುಪ್ಪ ಹಾಗೂ ವಿಜ್ಞಾನ: ಆಯುರ್ವೇದ ಔಷಧಗಳಲ್ಲಿ ಯೋಗವಾಹಕವಾದ ದೇಶಿ ತುಪ್ಪವನ್ನು ಬಳಸದಿರುವುದರಿಂದಲೇ ಕೆಲವು ಔಷಧಗಳು ಪರಿಣಾಮಕಾರಿಯಾಗುತ್ತಿಲ್ಲ. ಜೀವವನ್ನು ಭಗವಂತನತ್ತ ಕೊಂಡೊಯ್ಯುವ ಸಾಮರ್ಥ್ಯ ದೇಶಿ ತುಪ್ಪಕ್ಕಿದೆ.
ವಿಜ್ಞಾನಿಗಳು ಕೇವಲ ಭೌತಿಕ ಗುಣಗಳನ್ನು ವಿಶ್ಲೇಷಿಸಿದರೆ, ಋಷಿಮುನಿಗಳು ಜ್ಞಾನದೃಷ್ಟಿಯಿಂದ ಈ ಅಪೂರ್ವ ಸತ್ಯಗಳನ್ನು ಕಂಡುಕೊಂಡಿದ್ದಾರೆ.

ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯ ವ್ರತ ಸಂಪನ್ನ: ಕಳೆದ ಎರಡು ತಿಂಗಳಿನಿಂದ ಕೈಗೊಂಡಿದ್ದ ಚಾತುರ್ಮಾಸ್ಯ ವ್ರತವನ್ನು ಶ್ರೀಗಳು ಸೀಮೋಲ್ಲಂಘನ ಮಾಡುವ ಮೂಲಕ ಸಂಪನ್ನಗೊಳಿಸಿದರು. ಗಂಗಾವಳಿ ನದಿಗೆ ಫಲ ಸಮರ್ಪಿಸಿ, ತೊರ್ಕೆಯ ಕೆಂಗಾಳ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವದಿಸಿದರು.
60 ದಿನಗಳ ಕಾಲ ನಡೆದ ಈ ಚಾತುರ್ಮಾಸ್ಯದಲ್ಲಿ 23 ವಿವಿಧ ಸಮಾಜಗಳ ಭಕ್ತರು ಪಾಲ್ಗೊಂಡು ಸ್ವರ್ಣಪಾದುಕಾ ಪೂಜೆ ನೆರವೇರಿಸಿದರು. ಆಹಾರದ ಸರಿ-ತಪ್ಪುಗಳ ಕುರಿತು ಶ್ರೀಗಳು ನೀಡಿದ ಸುದೀರ್ಘ ಪ್ರವಚನ ಹಾಗೂ ಪಾರಂಪರಿಕ ಭೋಜನ ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿತ್ತು.
ಡಾ. ವಿಶ್ವನಾಥ್ ಭಟ್ ಹಾಗೂ ಡಾ. ವಿದ್ಯಾ ಭಟ್ ದಂಪತಿಗಳು ಗುರುಭಿಕ್ಷಾಸೇವೆ ಸಮರ್ಪಿಸಿದರು. ಉದ್ಯಮಿ ಕೆ. ಎಸ್. ಭಟ್ ಮುಂಬಯಿ, ವೆಂಕಟ ರಮಣ ಹೆಗಡೆ ಕವಲಕ್ಕಿ, ಗಣೇಶ್ ಆರ್ಕೊಡ್ಲು, ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶ್ರೀವತ್ಸ ಭೀಮನಕೋಣೆ, ವಿಷ್ಣು ಭಟ್ ಕವಲಕ್ಕಿ, ಪ್ರದೀಪ್ ನಾಯ್ಕ್ ದೇವರಬಾವಿ, ಮಹೇಶ್ ಶೆಟ್ಟಿ ಹಾಗೂ ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು. ನಾಳೆ ‘ಅನ್ನಬ್ರಹ್ಮ’ ಮಹಾಸಮಾರೋಪ ಜರುಗಲಿದೆ.
About The Author


More Stories
ಪರಿವರ್ತನೆಯೇ ಅನ್ನಬ್ರಹ್ಮ ಚಾತುರ್ಮಾಸ್ಯದ ಮೂಲ ಉದ್ದೇಶ; ಖ್ಯಾತಿ-ಪ್ರಚಾರವಲ್ಲ: ರಾಘವೇಶ್ವರ ಶ್ರೀ
ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವೂ ಒಪ್ಪಿದೆ: ರಾಘವೇಶ್ವರ ಶ್ರೀ
ದೀರ್ಘಾಯಸ್ಸು ಮತ್ತು ಆರೋಗ್ಯಕರ ಶರೀರವೇ ಆಧ್ಯಾತ್ಮಿಕ ಸಾಧನೆಗೆ ಮೂಲ: ರಾಘವೇಶ್ವರ ಶ್ರೀ