October 24, 2026

ಹಾಳಾದ ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ವತಿಯಿಂದ ರಸ್ತೆ ತಡೆ ಪ್ರತಿಭಟನೆ

ಚಿಕ್ಕೋಡಿ: ಗೋತೂರ್‌ನಿಂದ ಕಾಗವಾಡದವರೆಗೆ ಸಂಪೂರ್ಣವಾಗಿ ಹದೆಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ಉಗ್ರ ಪ್ರತಿಭಟನೆ ನಡೆಸಿದರು.

ಕರವೇ ಅಧ್ಯಕ್ಷ ಸಂಜು ಬಡಿಗೇರ ಹಾಗೂ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರಸ್ತೆ ತಡೆದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಆಕ್ರೋಶ: ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಸಂಜು ಬಡಿಗೇರ, “ಶಿಥಿಲಗೊಂಡಿರುವ ಈ ರಸ್ತೆಯನ್ನು ದುರಸ್ತಿ ಮಾಡುವಂತೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳಾಗಲಿ ಅಥವಾ ಶಾಸಕರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ಸಮಯದಲ್ಲಿ ಮತಕ್ಕಾಗಿ ಮನೆಗಳಿಗೆ ಅಲೆಯುವವರಿಗೆ ಈ ಗುಂಡಿಮಯ ರಸ್ತೆಗಳು ಕಾಣಿಸುತ್ತಿಲ್ಲವೇ?” ಎಂದು ತರಾಟೆಗೆ ತೆಗೆದುಕೊಂಡರು.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, “ರಸ್ತೆಯ ದುಸ್ಥಿತಿಯ ಬಗ್ಗೆ ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ವಿಜಯಪುರದ ಅಧಿಕಾರಿಗೆ ಸಂಬಂಧಿಸಿದ್ದು ಎನ್ನುತ್ತಾರೆ. ಅಲ್ಲಿನ ಅಧಿಕಾರಿಗೆ ಕರೆ ಮಾಡಿದರೆ ಫೋನ್ ಸ್ವೀಕರಿಸುವುದಿಲ್ಲ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿರುವ ಆಳವಾದ ಗುಂಡಿಗಳಿಂದಾಗಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ” ಎಂದು ಎಚ್ಚರಿಸಿದರು.

ವ್ಯಾಪಾರಸ್ಥರಾದ ಶೇಖರ ಚಿತ್ತವಾಡಗಿ ಮಾತನಾಡಿ, “ಕೇವಲ ಮುರುಮು ಹಾಕಿ ಪ್ಯಾಚ್ ವರ್ಕ್ ಮಾಡುವುದರಿಂದ ಪ್ರಯೋಜನವಿಲ್ಲ. ಬಿ.ಕೆ. ಕಾಲೇಜಿನಿಂದ ಹಾಲಟ್ಟಯವರೆಗೆ ಹೊಸ ರಸ್ತೆಯೇ ನಿರ್ಮಾಣವಾಗಬೇಕು. ರಸ್ತೆಯ ದೂಳು ಮಳೆಯಿಂದ ಅಂಗಡಿ ಮನೆಗಳಿಗೆ ನುಗ್ಗುತ್ತಿದ್ದು, ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಒಂದು ವಾರದೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಮೇಶ ಡಂಗೇರ, ಅಮೂಲ ನಾವಿ, ಅನೀಲ ನಾವಿ, ಉದಯ ಠಗರೆ, ಮೋಹನ ಪಾಟೀಲ, ಸುನೀಲ ತೇರದಾಳೆ, ರಾಜೇಂದ್ರ ಕಾಂಬಳೆ, ಪ್ರತಾಪ ಪಾಟೀಲ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.                   ವರದಿ : ಮಹೇಶ ಶರ್ಮ

About The Author

error: Content is protected !!