October 27, 2026

ಸಮಾಜವನ್ನು ಕತ್ತರಿಸುವವರಲ್ಲ, ಒಟ್ಟುಗೂಡಿಸುವವರು ಬೇಕು – ಬ್ರಹ್ಮಾನಂದ ಭಾರತೀ ಸ್ವಾಮೀಜಿ

ಕುಚಗುಂಡಿಯಲ್ಲಿ ಅನಂತಮೂರ್ತಿ ಹೆಗಡೆ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ತರಬೇತಿ ಸಮಾರೋಪ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ

ಸಿದ್ದಾಪುರ: “ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ (ಕತ್ತರಿಸುವ) ಕೆಲಸವಾಗುತ್ತಿದ್ದು, ನಾವೆಲ್ಲರೂ ಒಂದೇ, ನಾವೆಲ್ಲರೂ ಬಂಧು, ನಾವೆಲ್ಲರೂ ಹಿಂದೂ ಎಂಬ ಭಾವನೆಯೊಂದಿಗೆ ಸಮಾಜವನ್ನು ಬೆಸೆಯುವ ಕೆಲಸವಾಗಬೇಕು” ಎಂದು ಚೈತನ್ಯ ರಾಜಾರಾಮ ಕ್ಷೇತ್ರದ ಶಿರಳಗಿಯ ಬ್ರಹ್ಮಾನಂದ ಭಾರತೀ ಸ್ವಾಮೀಜಿಗಳು ನುಡಿದರು.

ತಾಲೂಕಿನ ಕುಚಗುಂಡಿಯಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

“ಮನುಷ್ಯನ ಶರೀರ ಇರುವುದೇ ಪರೋಪಕಾರಕ್ಕಾಗಿ. ಯಾವುದೇ ಅಪೇಕ್ಷೆಯಿಲ್ಲದೆ ಅನಂತಮೂರ್ತಿ ಹೆಗಡೆ ಅವರು ಸಮಾಜಮುಖಿ ಸತ್ಕಾರ್ಯ ಮಾಡಿದ್ದಾರೆ. ಕುಟುಂಬವನ್ನು ಬೆಸೆಯುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದ್ದು, ಮನೆಯನ್ನು ಒಡೆಯಲು ಬಿಡದೆ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಮಹಿಳೆಯರ ಮೇಲಿದೆ” ಎಂದರು. ಅಲ್ಲದೆ, ಊರು ಸುಂದರವಾಗಿರಲು ದೇವಸ್ಥಾನಗಳು ಅಭಿವೃದ್ಧಿಯಾಗಬೇಕು ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.

ಸ್ವಾವಲಂಬನೆಗೆ ಹೊಲಿಗೆ ತರಬೇತಿ ಆಸರೆ: ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, “ಸಮಾಜದಲ್ಲಿ ಹೊಲಿಯುವವರಿಗಿಂತ ಕತ್ತರಿಸುವವರೇ ಹೆಚ್ಚಾಗುತ್ತಿದ್ದಾರೆ. ನಾವೆಲ್ಲ ಒಂದೆಂಬ ಧ್ಯೇಯದೊಂದಿಗೆ ಯಾವುದೇ ಭೇದಭಾವವಿಲ್ಲದೆ ಈ ತರಬೇತಿ ಶಿಬಿರ ನಡೆಸಲಾಗಿದೆ. ಅಡುಗೆ ಹಾಗೂ ಹೊಲಿಗೆ ವಿದ್ಯೆ ಕಲಿತರೆ ಬಡತನದ ಬೇಗೆಯಿಂದ ಪಾರಾಗಿ ಸ್ವಾವಲಂಬಿಯಾಗಿ ಬದುಕಬಹುದು. ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಟ್ರಸ್ಟ್ ನಿರಂತರ ಸಹಕಾರ ನೀಡಲಿದೆ” ಎಂದರು.

ಪತ್ರಕರ್ತ ಪ್ರವೀಣ ಹೆಗಡೆ ಕರ್ಜಗಿ ಮಾತನಾಡಿ, ಕೃಷಿ ಮತ್ತು ಹಳ್ಳಿಗಳನ್ನು ಉಳಿಸುವ ಮೂಲಕ ಊರಿನಲ್ಲೇ ಉದ್ಯೋಗ ಕಂಡುಕೊಳ್ಳುವ ಅನಿವಾರ್ಯತೆ ಇಂದಿನ ಅಗತ್ಯವಾಗಿದೆ ಎಂದರು. ಹಸ್ರಗೋಡ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು.

ಸಮೃದ್ಧಿಯ ಸಮಾರೋಪ ಹಾಗೂ ಪ್ರಸಾದ ವಿತರಣೆ: ಕಾರ್ಯಕ್ರಮದ ಅಂಗವಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಿತು. ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಶ್ರೀಗಳ ಸಮ್ಮುಖದಲ್ಲಿ ಪ್ರಮಾಣಪತ್ರ ಹಾಗೂ ಸೀರೆ-ಬಾಗಿನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೂನ್ನೂರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ಶಿಬಿರಾರ್ಥಿಗಳು ಟ್ರಸ್ಟ್‌ನ ಈ ಸಮಾಜಮುಖಿ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಮುಖ ಅಣ್ಣಪ್ಪ ಗೌಡ, ಗ್ರಾ.ಪಂ. ಮಾಜಿ ಸದಸ್ಯ ಕೆರಿಯಾ ಗೌಡ, ದೇವಸ್ಥಾನದ ಅಧ್ಯಕ್ಷ ಸುಬ್ರಾಯ ಹೆಗಡೆ, ನಾರಾಯಣ ಹೆಗಡೆ ಚಾರೇಕೊಣೆ, ಹೊಲಿಗೆ ಶಿಕ್ಷಕಿ ಆಶಾ ಶಿರಸಿ ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು. ನೇತ್ರಾವತಿ ಹೆಗಡೆ ಸ್ವಾಗತಿಸಿದರು, ಗುರುನಾಥ ಹುಕ್ಲಕೈ ನಿರೂಪಿಸಿದರು, ವಿನಯ ದಂಟಕಲ್ ವಂದಿಸಿದರು.

About The Author

error: Content is protected !!