October 7, 2025

ಶಿರಸಿಯಲ್ಲಿ ಸಿಲಿಂಡರ್ ಸ್ಫೋಟ ದುರಂತ ಮನೆಯಲ್ಲಿ ಮಲಗಿದ್ದ ವಿದ್ಯಾರ್ಥಿನಿ ಸುಟ್ಟು ಸಾವು

ಶಿರಸಿ: ಮನೆಯಲ್ಲೇ ಮಲಗಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಸಿಲಿಂಡರ್ ಸ್ಫೋಟದಿಂದಾಗಿ ಸುಟ್ಟು ಕರಕಲಾದ ಹೃದಯ ವಿದ್ರಾವಕ ಘಟನೆ ಶಿರಸಿ ತಾಲೂಕಿನ ಮುರ್ಕಿನಕೊಡ್ಲಿಯಲ್ಲಿ ಮಂಗಳವಾರ ಸಂಭವಿಸಿದೆ.
ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ರಂಜನಾ ದೇವಾಡಿಗ (21) ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ. ನಾಗಪ್ಪ ಹಾಗೂ ನಾಗವೇಣಿ ದೇವಾಡಿಗ ದಂಪತಿಯ ಸಾಕು ಮಗಳು.

ತಲೆನೋವಿನ ಕಾರಣ ಮಂಗಳವಾರ ಕಾಲೇಜಿಗೆ ಹೋಗದೆ ಮನೆಯಲ್ಲಿ ಮಲಗಿದ್ದ ರಂಜನಾ, ಮಧ್ಯಾಹ್ನದ ಹೊತ್ತಿಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿಗೆ ಆಹುತಿಯಾದರು. ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಪಕಾಸ್ ಹಾಗೂ ಹಂಚುಗಳು ಹಾರಿ ಹೋಗಿವೆ.

ಘಟನೆಯ ಶಬ್ದ ಕೇಳಿ ನೆರೆಯವರು ಬಾಗಿಲು ಒಡೆದು ಒಳನುಗ್ಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ, ಅಷ್ಟರೊಳಗೆ ಯುವತಿ ಸಾವನ್ನಪ್ಪಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಮನೆ ಸುಟ್ಟು ಲಕ್ಷಾಂತರ ರೂ. ನಷ್ಟವಾಗಿದೆ.
ಮಕ್ಕಳಿಲ್ಲದ ಕಾರಣ 20 ವರ್ಷಗಳ ಹಿಂದೆ ರಂಜನಾವನ್ನು ದತ್ತು ಪಡೆದಿದ್ದ ಪೋಷಕರು ಏಕೈಕ ಮಗಳನ್ನೇ ಕಳೆದುಕೊಂಡ ದುಃಖದಲ್ಲಿ ಆಕ್ರಂದನ ತೋಡಿಕೊಂಡರು.

ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಅವರು ಮೃತಳ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

error: Content is protected !!