ಗೇರುಸೊಪ್ಪೆ ಮತ್ತು ತಲಕಳಲೆ ಜಲಾಶಯಗಳ ನಡುವೆ ವಿದ್ಯುತ ನಿಗಮದವರು ಸ್ಥಾಪಿಸಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ ಭೂಗತ ಜಲ ವಿದ್ಯುತ ಯೋಜನೆಯ ಸ್ಥಳ ಪರಿಶೀಲನೆಗೆ ಆಗಮಿಸಿರುವ ಕೇಂದ್ರ ವನ್ಯ ಜೀವಿ ಮಂಡಳಿಯ ತ್ರೀಸದಸ್ಯರ ತಂಡವನ್ನು ಗೇರುಸೊಪ್ಪೆಯ ಗ್ರಾಮ ಪಂಚಾಯಿತಿಯ ಪದಾಧಿಕಾರಿಗಳು ಮತ್ತು ಹೋರಾಟ ಸಮಿತಿಯ ಪ್ರಮುಖರ ನಿಯೋಗವು ಇಂದು ಶಾಸಕ ದಿನಕರ ಕೆ.ಶೆಟ್ಟಿಯವರ ನೇತೃತ್ವದಲ್ಲಿ ಗೇರುಸೊಪ್ಪೆಯ ಸಿಂಗಳಿಕ ಇಕೋ ಪಾರ್ಕಿನಲ್ಲಿ ಭೇಟಿ ಮಾಡಿ ಯೋಜನೆಗೆ ಅನುಮತಿ ನಿರಾಕರಿಸುವಂತೆ ಮನವಿ ಸಲ್ಲಿಸಿದರು.
ಕೇಂದ್ರ ವನ್ಯ ಜೀವಿ ಮಂಡಳಿಯ ಡಾ. ಹರಿಶಂಕರ ಸಿಂಗ್ ಮತ್ತು ರಮಣ ಸುಕುಮಾರನ್,ರಾಷ್ಟ್ರೀಯ ಹುಲಿ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್ ಅವರನ್ನು ಒಳಗೊಂಡ ತ್ರೀಸದಸ್ಯರ ತಂಡದ ಜೊತೆ ತಾಲ್ಲೂಕಿನ ವಿವಿದ ಸಂಘಟನೆಗಳ ಪ್ರಮುಖರ ನಿಯೋಗವು ಉದ್ದೇಶಿತ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ಕುರಿತು ವಿಸ್ತೃತ ಚರ್ಚೆ ನಡೆಸಿ ಅವೈಜ್ಞಾನಿಕ ಯೋಜನೆಯ ವಿರುದ್ಧ ತಮ್ಮ ಅಹವಾಲು ಸಲ್ಲಿಸಿದರು.
ಈಸಂದರ್ಬದಲ್ಲಿ ಸ್ಥಳೀಯ ಗೇರುಸೊಪ್ಪೆ (ನಗರಬಸ್ತಿಕೇರಿ)ಗ್ರಾಮ ಪಂಚಾಯತಿಯ ಅದ್ಯಕ್ಷೆ ಸುನಿತಾ ಹೆಗಡೆ ಮಾತನಾಡಿ ಪರಿಸರ ಸೂಕ್ಷ್ಮ ಪಶ್ಚಿಮಘಟ್ಟದ ಸಿಂಗಳಿಕ ಅಭಯಾರಣ್ಯದ ಹಲವು ಪ್ರದೇಶ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುತ್ತದೆ. ಅಪರೂಪದ ಸಿಂಗಳಿಕ ಸಹಿತ ವಿವಿಧ ವನ್ಯಜೀವಿಗಳ ಆವಾಸಸ್ಥಾನ ವಾಗಿರುವ ಈಪ್ರದೇಶದಲ್ಲಿ ಅರಣ್ಯ, ಪರಿಸರ ಮತ್ತು ರೈತರ ಜನಜೀವನದ ಹಿತದ್ರಷ್ಟಿಯಿಂದ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ತಮ್ಮ ಪಂಚಾಯಿತಿಯ ಗ್ರಾಮ ಸಭೆ ನಿರ್ಣಯ ಸ್ವೀಕರಿಸಿರುವದನ್ನು ವಿವರಿಸಿ ಯೋಜನೆಗೆ ಅನುಮತಿ ನೀಡದಂತೆ ಮಂಡಳಿಯ ಗಮನ ಸೆಳೆಯಲು ಮನವಿಮಾಡಿದರು.
ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಮಾತನಾಡಿ ಯೋಜನೆಯ ಅನುಷ್ಠಾನದಿಂದ ಭವಿಷ್ಯದಲ್ಲಿ ಆಗುವ ಪ್ರತಿಕೂಲ ಪರಿಣಾಮಗಳನ್ನು ವಿವರಿಸಿ ಭವಿಷ್ಯದಲ್ಲಿ ಭೂಕುಸಿತದ ಅಪಾಯ ನಿಶ್ಚಿತ ಎಂದಿರುವ ಖ್ಯಾತ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಮತ್ತು ಡಾ.ಸುಭಾಷಚಂದ್ರನ್ ರವರು ನೀಡಿದ ಲಿಖಿತ ಅಭಿಪ್ರಾಯವನ್ನು ತಂಡಕ್ಕೆ ಒಪ್ಪಿಸಿದರು.
ನ್ಯಾಯವಾದಿ ವಿಕ್ರಮ ನಾಯ್ಕ ಇನ್ನಷ್ಟು ವಿಸ್ತೃತವಾಗಿ ಇದನ್ನು ಆಂಗ್ಲ ಭಾಷೆಯಲ್ಲಿ ವಿವರಿಸಿ ಯೋಜನೆಯ ಅನುಷ್ಠಾನದಿಂದ ಆಗುವ ಸಾಧಕ ಭಾದಕಗಳ ಕುರಿತು ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.
ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಎಂ.ನಾಯ್ಕ ಮತ್ತು ಸಂಚಾಲಕ ಕೇಶವ ನಾಯ್ಕ ಬಳ್ಕೂರ, ಮಾಜಿ ಜಿ.ಪಂ.ಸದಸ್ಯೆ ಶ್ರೀಕಲಾ ,ಶ್ರೀಕ್ಷೇತ್ರ ಬಂಗಾರಮಕ್ಕಿಯ ಅಜಿತಕುಮಾರ ಹೆಗಡೆ,ಕಿರಣ ಮಹಾಲೆ ಮುಂತಾದ ಪ್ರಮುಖರು ತಮ್ಮ ಅಹವಾಲು ಸಲ್ಲಿಸಿದರು.
ಕೊನೆಯಲ್ಲಿ ಮಾತನಾಡಿದ ಶಾಸಕ ದಿನಕರ ಕೆ.ಶೆಟ್ಟಿಯವರು ಮಾತನಾಡಿ ಶರಾವತಿ ನದಿಪಾತ್ರದ ಹೊನ್ನಾವರ ತಾಲ್ಲೂಕಿನ ಲಕ್ಷಾಂತರ ಎಕರೆ ಕ್ರಷಿ ಭೂಮಿಗೆ ಏತ ನೀರಾವರಿ ಯೋಜನೆಗಳ ಮೂಲಕ ನೀರುಣಿಸಲಾಗುತ್ತಿದೆ.ಇಡಗುಂಜಿ,ಮುರ್ಡೇಶ್ವರ ಯಾತ್ರಾ ಸ್ಥಳವೂ ಸೇರಿದಂತೆ ಹೊನ್ನಾವರ ನಗರ ಮತ್ತು ಗ್ರಾಮೀಣ ಭಾಗಗಳ ಲಕ್ಷಾಂತರ ಜನರು ಕುಡಿಯುವ ನೀರಿನ ಅಗತ್ಯ ಸೇವೆಗಳಿಗೆ ಶರಾವತಿ ನದಿಯನ್ನು ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಕೊರತೆ ಆಗುತ್ತಿರುವದರಿಂದ ಸಮುದ್ರದ ಉಪ್ಪುನೀರು ನದಿ ಸೇರುತ್ತಿದೆ.ಇದರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ. ಉದ್ದೇಶಿತ ಯೋಜನೆ ಅನುಷ್ಠಾನವಾದರೆ ಅಮೂಲ್ಯ ಮಳೆಕಾಡು ನಾಶವಾಗಲಿದ್ದು,ವನ್ಯ ಜೀವಿಗಳ ಉಪಟಳ,ಉಪ್ಪು ನೀರಿನ ಸಮಸ್ಯೆ ಹೆಚ್ಚಲಿದೆ. ಯೋಜನೆಗೆ ಅನುಮತಿ ನಿರಾಕರಿಸಲು ಅಗತ್ಯ ಶಿಫಾರಸು ಮಾಡುವಂತೆ ಅವರು ಕೇಂದ್ರ ತಂಡಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೊನ್ನಾವರ ಡಿ.ಎಫ್.ಓ.ಯೋಗೀಶ್ ಸಿ.ಮತ್ತು ಎಸಿ ಎಫ್ ಜಿ.ಲೋಹಿತ್ ವಿದ್ಯುತ ನಿಗಮದ ಹಿರಿಯ ಅಧಿಕಾರಿಗಳು,ಬ್ಲಾಕ್ ಕಾಂಗ್ರೆಸ್ಸ ಅಧ್ಯಕ್ಷ ಗೋವಿಂದ ನಾಯ್ಕ,ಬಿಜೆಪಿಯ ತಾಲೂಕು ಅಧ್ಯಕ್ಷ ಮಂಜುನಾಥ ನಾಯ್ಕ ಮತ್ತು ಸ್ಥಳೀಯ ಗ್ರಾ.ಪಂ.ಸದಸ್ಯರು,ರೈತರು ಇದ್ದರು.
ಕೇಂದ್ರ ವನ್ಯ ಜೀವಿ ಮಂಡಳಿಯ ಸ್ಟ್ಯಾಂಡಿಗ್ ಕಮಿಟಿಯ ತ್ರೀಸದಸ್ಯರ ತಂಡವು ಶನಿವಾರದಿಂದ ಸತತ ಎರಡು ದಿವಸ ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿದೆ. ಬೇಗೋಡಿ,ಹಾಡಗೇರಿ ಭಾಗದ ರೈತರು ಬಂಗಾರಮಕ್ಕಿಯ ಮಾರೂತಿ ಗುರೂಜಿಯವರ ನೇತೃತ್ವದಲ್ಲಿ ಕೈಯಲ್ಲಿ ಶರಾವತಿ ಉಳಿಸಿ ಫಲಕ ಪ್ರದರ್ಶಿಸಿ ಕೇಂದ್ರ ತಂಡವನ್ನು ಸ್ವಾಗತಿಸಿದ್ದು ವೈಶಿಷ್ಟ್ಯ ಪೂರ್ಣವಾಗಿತ್ತು.
ಸ್ಥಳ ತನಿಖೆಯ ಪೂರ್ತಿಗೊಳಿಸಿದ ಕೇಂದ್ರ ತಂಡವು
ಕೆ.ಪಿ.ಸಿ.ಯ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯ ಪ್ರಸ್ತಾವನೆಗೆ ಅನುಮತಿ ನೀಡಬೇಕೇ ಅಥವಾ ಬೇಡವೆ ಎನ್ನುವ ಕುರಿತು ಕೇಂದ್ರ ವನ್ಯ ಜೀವಿ ಮಂಡಳಿಗೆ ತನ್ನ ವರದಿಯನ್ನು ಸಲ್ಲಿಸಲಿದೆ.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ