March 2, 2026

“ಕಲ್ಬಾಗ ಶ್ರೀ ಗೋವಿಂದ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಹೊನ್ನಾವರ: ನಾದ ಮನುಷ್ಯನ ಬದುಕಿಗೆ ಮುದ ನೀಡುತ್ತದೆ. ಕಲ್ಬಾಗ ಎನ್ನುವ ಊರನ್ನು “ಕಲಾಭಾಗವನ್ನಾಗಿ” ಮಾಡಿರುದು ದಿ.ಗೋವಿಂದ ಹೆಗಡೆಯವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿಗಳು, ನಿವೃತ್ತ ಉಪನ್ಯಾಸಕರಾದ ಡಾ. ಶ್ರೀಪಾದ ಶೆಟ್ಟಿ ಅಭಿಪ್ರಾಯಪಟ್ಟರು.


ಅರೇಅಂಗಡಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಿ. ಗೋವಿಂದ ಹೆಗಡೆಯವರ ಬದುಕಿನ ಸ್ಥೂಲ ಚಿತ್ರಣದ ಅನಾವರಣದ “ಕಲ್ಬಾಗ ಶ್ರೀ ಗೋವಿಂದ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ 2025” ಉದ್ಘಾಟಿಸಿ ಮಾತನಾಡಿದರು.


ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ ಎನ್ನುವ ಮಾತು ಎಲ್ಲಡೆ ಕೇಳಿ ಬರುತ್ತಿತ್ತು.‌ ಆ ದಿನದಲ್ಲೇ ದಿ.ಗೋವಿಂದ ಹೆಗಡೆಯವರು‌ ಕಲ್ಬಾಗ ಕುಟುಂಬದ ಮಕ್ಕಳನ್ನು ಸಂಗೀತದ ಆಸ್ತಿಯನ್ನಾಗಿ ಮಾಡಿದ್ದಾರೆ. ಇನ್ನೊಬ್ಬರ ಕಷ್ಟಕ್ಕೆ ಕರಗುವ ಗುಣವುಳ್ಳ ವ್ಯಕ್ತಿಯ ಜನ್ಮಶತಮಾನೊತ್ಸವ ಅರ್ಥಪೂರ್ಣವಾಗಿ ಸಂಘಟಕರು ಆಯೋಜಿಸುವ ಮೂಲಕ ಅವರ ಜೀವನದ ವಿವಿಧ ಮಜಲುಗಳನ್ನು ಮತ್ತೊಮ್ಮೆ ಈ ತಲೆಮಾರಿನ ಮುಂದೆ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.


ಪತ್ರಕರ್ತರು ಸಮೂಹ ಮಾಧ್ಯಮದ ಪ್ರಮುಖರಾದ ಬಿ ಗಣಪತಿ ಮಾತನಾಡಿ ಈ ಕುಟುಂಬದ 45 ಕ್ಕೂ ಹೆಚ್ಚು ಜನರು ಬೇರೆ ಬೇರೆ ವೃತ್ತಿಯ ಜೊತೆಗೆ ಸಂಗೀತದ ಮೂಲಕ ಸಾತ್ವಿಕ ಪ್ರಪಂಚವನ್ನು ಜೀವಂತವಾಗಿರಿಸಿದ್ದಾರೆ. ತೊಳಸಾಣಿಯ ಮರಾಠಿ ಸಮುದಾಯದ ತೋಟದಲ್ಲಿ ಸಸ್ಯ ಬೆಳೆಯಲು ಗೋವಿಂದ ಹೆಗಡೆಯವರು, ಶಿಕ್ಷಣದ ಮೂಲಕ ಜಾಗೃತಿ ಮೂಡಿಸಿದವರಲ್ಲಿ‌ ಆರ್. ವಿ.ಭಂಡಾರಿ ಎರಡು ಅನನ್ಯ ರತ್ನರಾಗಿ ಈ ಗ್ರಾಮಕ್ಕೆ ಕೊಡುಗೆ ನೀಡಿದ್ದಾರೆ.‌ ಬದಕನ್ನು ಪರವಾಲಂಭಿಯಾಗದಂತೆ ಜೀವನ ನಡೆಸುವಂತೆ ಆತ್ಮಪ್ರಜ್ಞೆಯನ್ನು ಇರ್ವರು ಮೂಡಿಸಿದ್ದಾರೆ. ಇರ್ವರು ವಿವಿಧ ರಂಗದ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅಭ್ಯಸಿಸಿ ನಾವೆಲ್ಲರೂ ಅದನ್ನು ಪಾಲಿಸಬೇಕಿದೆ ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.


ಈ ಭಾಗದ ಎಸ್.ಕೆ.ಪಿ. ಶಿಕ್ಷಣ ಸಂಸ್ಥೆಯ ಬೆಳವಣೆಗೆ ಅವಿರತವಾಗಿ ಶ್ರಮಿಸಿದರೂ, ಅವರ ಶತಮಾನೊತ್ಸವ ಕಾರ್ಯಕ್ರಮ ಮಾಡಲು ಸ್ಥಳ ನೀಡದೆ ಇದ್ದರೆ, ಇದರಿಂದ ಗೋವಿಂದ ಹೆಗಡೆಯವರಿಗೆ ಅವಮಾನವಾಗುವುದಿಲ್ಲ, ಬದಲಿಗೆ ಈ ಊರಿಗೆ ಆಗುವ ಅವಮಾನ ಎಂದು ಅಸಮಧಾನ ವ್ಯಕ್ತಪಡಿಸಿದರು.


ದಿ ಕಲ್ಬಾಗ ಗೋವಿಂದ ಹೆಗಡೆ ಕುಟುಂಬಕ್ಕೆ ಸಂಗೀತ ಪಾಠ ಮಾಡಿದ ಎಸ್.ಎಮ್.ಭಟ್ ಕಟ್ಟಿಗೆ ಇವರಿಗೆ “ಸಂಗೀತ ಕುಲಗುರು” ಕಲಾ ಗೌರವ ಸಮರ್ಪಣೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹತ್ತು ಜನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ವೇ. ಸುಬ್ರಹ್ಮಣ್ಯ ಭಟ್, ಸಹಕಾರಿ ಧುರೀಣರಾದ ವಿ.ಎನ್.ಭಟ್ ಅಳ್ಳಂಕಿ‌ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ಸುಮಾರು 50 ಕ್ಕೂ ಹೆಚ್ಚಿನ ಸಂಗೀತ ಕಲಾವಿದರನ್ನು ಬೆಳೆಸಿದ ಕೀರ್ತಿ ಕಲ್ಬಾಗ ಕುಟುಂಬಕ್ಕೆ ಸಲ್ಲುತ್ತದೆ. ಆ ಮೂಲಕ ಸಂಗೀತದ ದೊಡ್ಡ ಪರಂಪರೆಯನ್ನು ದೇಶದ ತುಂಬಾ ಹರಡಲು ಕಾರಣರಾಗಿದ್ದಾರೆ. ಗ್ರಾಮದವರೆಲ್ಲರೂ ಒಟ್ಟಾಗಿ ಅವರ ನಿಧನದ ನಂತರವೂ ನೂರನೇ ವರ್ಷದ ಜನ್ಮದಿನದ ಸಂಭ್ರಮವನ್ನು ಆಚರಿಸುತ್ತಿರುವುದು ಮಾದರಿಯಾಗಿದೆ.
ನನ್ನನ್ನು ಸೇರಿ ತಾಲೂಕಿನಲ್ಲಿ ನಾಟಕದ ಹುಚ್ಚು ಅನೇಕರಿಗೆ ಹಚ್ಚಿಸಿದವರಲ್ಲಿ ಕಲ್ಬಾಗ ಗೊವಿಂದ ಹೆಗಡೆಯವರು ಕಾರಣರಾಗಿದ್ದಾರೆ ಎಂದು ಕೊಡುಗೆಯನ್ನು ಸ್ಮರಿಸಿದರು.


ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಜಿ ಆರ್ ಹೆಗಡೆ ಗುಬ್ಬು, ‌ಪಂ. ಪರಮೇಶ್ವರ ಹೆಗಡೆ ಉಪಸ್ಥಿತರಿದ್ದರು. ನಾಗರಾಜ ಹೆಗಡೆ ಖಾಸ್ಕಂಡ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಮೊದಲು ದಿ. ಗೋವಿಂದ ಹೆಗಡೆ ಸ್ವರ ಸಂಯೋಜಿಸಿದ ನಾಟ್ಯಗೀತೆ ಹಾಗೂ ಭಕ್ತಿಗೀತೆಗಳನ್ನು ಕುಟುಂಬದವರು ಗಾನ ನಮನ ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ
ಪಂಡಿತ್ ಗಣಪತಿ ಭಟ್ ಹಾಸನಗಿ ಇವರಿಂದ ಹಿಂದುಸ್ತಾನಿ ಗಾಯನ ಜರುಗಿತು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲ್ಬಾಗ ಸಂಹಾದಿನಿಯಲ್ಲಿ ಸತೀಶ ಭಟ್ ಹೆಗ್ಗಾರ ಸಹಕರಿಸಿದರು. ನಂತರ “ಕೃಷ್ಣ ಸಂಧಾನ” ಯಕ್ಷಗಾನ ಪೇಕ್ಷಕರ ಮನಸೂರೆಗೊಂಡಿತು.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!