ಭಟ್ಕಳ: ತಾಲೂಕಿನ ಕುಂಟವಾಣಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಶ್ರೀಕರ ಗಜಾನನ ಹೆಬ್ಬಾರ್ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಧಾರ್ಮಿಕ ಪಠಣ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಕಾರವಾರ ಶೈಕ್ಷಣಿಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಧಾರ್ಮಿಕ ಪಠಣ (ಸಂಸ್ಕೃತ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಶ್ರೀಕರ, ಕೊಪ್ಪಳದಲ್ಲಿ ನಡೆದ 2025–26ನೇ ಸಾಲಿನ ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ತನ್ನ ಸಾಮರ್ಥ್ಯ ತೋರಿಸಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾನೆ.
ಪ್ರಾಥಮಿಕ ಹಂತದಿಂದಲೇ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗೆಲ್ಲುತ್ತಾ ಬಂದಿರುವ ಈತನಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿ ಇದೆ. 7ನೇ ತರಗತಿಯಲ್ಲಿ ಭಾವಗೀತೆ ಹಾಗೂ ಧಾರ್ಮಿಕ ಪಠಣದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನಸೆಳೆದಿದ್ದ. ತಂದೆ ಗಜಾನನ ಹೆಬ್ಬಾರ್ ಅವರಿಂದಲೇ ಶಾಸ್ತ್ರೀಯ ಹಾಗೂ ಸುಗಮ ಸಂಗೀತ, ಧಾರ್ಮಿಕ ಪಠಣ ತರಬೇತಿ ಪಡೆಯುತ್ತಿರುವ ಶ್ರೀಕರ, ಹಾರ್ಮೋನಿಯಂ ಅಭ್ಯಾಸವನ್ನು ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಅವರಲ್ಲಿ ಹಾಗೂ ತಬಲಾವನ್ನು ಅಜಯ್ ಹೆಗಡೆ ಅವರಲ್ಲಿ ಕಲಿಯುತ್ತಿದ್ದಾನೆ.
ಮುಂಬೈಯ ಎ.ಬಿ.ಜಿ.ಎಂ.ಪಿ. ಮಂಡಳಿ ನಡೆಸುವ ಪ್ರಾರಂಭಿಕ, ಪ್ರವೇಶಿಕ ಹಾಗೂ ಪ್ರಥಮ ಪ್ರವೇಶಿಕ ಪೂರ್ಣ ಪರೀಕ್ಷೆಗಳಲ್ಲಿ ತಬಲಾ ಮತ್ತು ಸಂಗೀತ ವಿಭಾಗಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿರುವುದು ವಿಶೇಷವಾಗಿದೆ.
ಶಾಲಾ ಅಧ್ಯಯನದ ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವ ಶ್ರೀಕರನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ. ಈ ಸಾಧನೆಗೆ ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಅಧ್ಯಾಪಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

More Stories
ಎಐಟಿಎಂನಲ್ಲಿ ವಿಟಿಯು ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿ ಚಾಲನೆ
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ