ಶಿರಸಿ: ತಾಲೂಕಿನ ಮಂಜಗುಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಂಪಖಂಡ ಹೋಬಳಿಯ ತೆಪ್ಪಾರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಪೀಠೋಪಕರಣಗಳನ್ನೊಳಗೊಂಡ 17 ಕೋಟಿ ರೂ. ಮೊತ್ತದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಿರಸಿ-ಸಿದ್ದಾಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಭೀಮಣ್ಣ ಟಿ. ನಾಯ್ಕ ಅವರು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಒಂದು ಮೈಲಿಗಲ್ಲಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಯಾವುದೇ ಒಂದು ಸರ್ಕಾರಿ ಕಟ್ಟಡ ಅಥವಾ ಅಭಿವೃದ್ಧಿ ಕಾರ್ಯ ನಡೆಯಬೇಕಾದರೆ ಭೂಮಿಯ ಲಭ್ಯತೆ ಅತ್ಯಗತ್ಯ. ತೆಪ್ಪಾರ ಭಾಗದಲ್ಲಿ ವಸತಿ ಶಾಲೆಗೆ ಸೂಕ್ತವಾದ ಜಾಗ ಒದಗಿಸಲು ಸಹಕರಿಸಿದ ಗ್ರಾಮಸ್ಥರ ಔದಾರ್ಯ ದೊಡ್ಡದು. ಶಿಕ್ಷಣದ ಹಿತದೃಷ್ಟಿಯಿಂದ ಜಾಗ ನೀಡಿದ ಇಲ್ಲಿನ ಜನತೆ ಅಭಿನಂದನಾರ್ಹರು,” ಎಂದು ಮುಕ್ತ ಕಂಠದಿಂದ ಗುಣಗಾಣ ಮಾಡಿದರು.

ವಸತಿ ಶಾಲೆಯ ಇತಿಹಾಸವನ್ನು ಸ್ಮರಿಸಿದ ಶಾಸಕರು, “ಕಳೆದ ಅನೇಕ ವರ್ಷಗಳಿಂದ ಈ ವಸತಿ ಶಾಲೆಯು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಆದರೂ ಸಹ ಪ್ರಾಂಶುಪಾಲರ ಹಾಗೂ ಶಿಕ್ಷಕರ ಕಠಿಣ ಪರಿಶ್ರಮದಿಂದ ಶಾಲೆ ಪ್ರಾರಂಭವಾದಾಗಿನಿಂದಲೂ ಉತ್ತಮ ಫಲಿತಾಂಶ ಪಡೆಯುತ್ತಿದ್ದು ಗಮನಾರ್ಹವಾದದ್ದು.ಆದರೆ ಇಂದು 17 ಕೋಟಿ ರೂ. ವೆಚ್ಚದ ಭವ್ಯ ಕಟ್ಟಡಕ್ಕೆ ಕಾಲ ಕೂಡಿಬಂದಿದೆ. ಇದು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ಬಲ ನೀಡಲಿದೆ,” ಎಂದರು.
ನಂತರ ಮಾತನಾಡಿದ ಎಸ್ ಕೆ ಭಾಗವತ ಸದಸ್ಯರು ಬಗರ್ ಹುಕುಂ ಸಮಿತಿ ರವರು ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ವಸತಿ ಶಾಲೆಗಳು ದಾರಿದೀಪವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಗಿರಿಜಾ ಪೂಜಾರಿ ರವರು ಸ್ವಾಗತಿಸಿದರೆ, ಜಿಲ್ಲಾ ಸಮನ್ವಯ ಅಧಿಕಾರಿ ರಾಜು ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸೌಖ್ಯ ಭಟ್ ನಿರೂಪಿಸಿದರೆ ಪ್ರವೀಣ್ ಗೌಡ ರವರು ವಂದಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಉಮೇಶ್ ವೈ ಕೆ, ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಚನ್ನಬಸವ ಹಾವಣಿಗಿ, ಆಡಳಿತಾಧಿಕಾರಿಗಳು ಗ್ರಾಮ ಪಂಚಾಯತ್ ಮಂಜಗುಣಿ ಹಾಗೂ ಸಿರ್ಸಿ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಗ್ರೀಸ್ಮಾ ಪಟಗಾರ, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡರ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ, ವಸತಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು, ಸಿಬ್ಬಂಧಿಗಳು,ಊರ ನಾಗರಿಕರು ಹಾಗೂ ಇತರರು ಉಪಸ್ಥಿತರಿದ್ದರು.

More Stories
ಮಾ.೧೫ಕ್ಕೆ ಜಡ್ಡಿಗದ್ದೆಯಲ್ಲಿ ‘ಹಿಂದೂ ಸಮಾವೇಶ’: ಹುಕ್ಕೇರಿ ಶ್ರೀ ಭಾಗಿ
ಯುಗಾದಿಯಿಂದ ರಾಮನವಮಿವರೆಗೆ ನವ ದಿನನದಿ ಉಳಿಸಿ ಸತ್ಯಾಗ್ರಹಕ್ಕೆ ಭಜನಾ ಅಭಿಯಾನ
ಶಿರಸಿಯಲ್ಲಿ ‘ವಿಶೇಷ ಯುವ ಸಂಗೀತೋತ್ಸವ’