ಭಟ್ಕಳ: ಸಮಾಜದಲ್ಲಿ ಆರ್ಥಿಕವಾಗಿ ಸಾಮರ್ಥ್ಯ ಹೊಂದಿರುವವರು ತಮ್ಮ ಸಂಪತ್ತಿನ ಒಂದು ಭಾಗವನ್ನು ಸಮಾಜ ಸೇವೆಗೆ ಬಳಸಿದರೆ ಅದು ಇತರರಿಗೂ ಪ್ರೇರಣೆಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಉದ್ಯಮಿ ವಾಮನ ರಾಮನಾಥ ಶಾನಭಾಗ ಅವರು ತಮ್ಮ ಪತ್ನಿ ಸ್ಮರಣಾರ್ಥ ನಿರ್ಮಿಸಿದ ‘ದಿ. ಗೀತಾ ವಾಮನ ಶಾನಭಾಗ ತುರ್ತು ಚಿಕಿತ್ಸಾ ಘಟಕ’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ದಾನಿಗಳ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ನಂತರ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸರ್ಕಾರ ಮಾತ್ರವೇ ಎಲ್ಲ ಮೂಲಸೌಕರ್ಯಗಳನ್ನು ನಿರ್ಮಿಸಬೇಕು ಎಂಬ ಮನೋಭಾವದಿಂದ ಹೊರಬರಬೇಕು. ಸಮಾಜದ ಒಳಿತಿಗಾಗಿ ಉಳ್ಳವರು ತಮ್ಮ ಆಸ್ತಿಯ ಒಂದು ಭಾಗವನ್ನು ಮೀಸಲಿಟ್ಟರೆ ಅದು ಇನ್ನಷ್ಟು ಜನರಿಗೆ ಮಾದರಿಯಾಗುತ್ತದೆ. ಅಗತ್ಯವಿರುವಷ್ಟು ಉಳಿಸಿಕೊಂಡು ಉಳಿದ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಬಳಸುವ ಮನೋಭಾವ ಬೆಳೆಬೇಕು ಎಂದು ಹೇಳಿದರು.
ಭಟ್ಕಳ ಸರಕಾರಿ ಆಸ್ಪತ್ರೆಯನ್ನು ಈಗಿರುವ 100 ಹಾಸಿಗೆಗಳಿಂದ 250 ಹಾಸಿಗೆಗಳ ಮಟ್ಟಕ್ಕೆ ಮೇಲ್ದರ್ಜೆಗೆರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಮುಖ್ಯಮಂತ್ರಿ ಬಜೆಟ್‌ನಲ್ಲಿ ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಘೋಷಿಸಿರುವುದನ್ನು ಉಲ್ಲೇಖಿಸಿದರು.
ಇತ್ತೀಚೆಗೆ 10 ವರ್ಷ ಸೇವೆ ಸಲ್ಲಿಸಿದ ಕೆಲ ವೈದ್ಯರ ವರ್ಗಾವಣೆಯಿಂದ ಆಸ್ಪತ್ರೆಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿದೆ. ಇದು ಸರ್ಕಾರದ ನಿಯಮವಾಗಿದ್ದು, ಹೊಸ ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವರ್ಗಾವಣೆಗೊಂಡ ಕೆಲ ವೈದ್ಯರು ಮತ್ತೆ ಭಟ್ಕಳ ಆಸ್ಪತ್ರೆಗೆ ಬರುವ ಸಾಧ್ಯತೆಯೂ ಇದೆ ಎಂದು ಹೇಳಿದರು.
ಆಸ್ಪತ್ರೆಯ ಅರವಳಿಕೆ ತಜ್ಞೆ ಡಾ. ಸವಿತಾ ಕಾಮತ್ ಮಾತನಾಡಿ, 1955ರಲ್ಲಿ ಕಾಟೇಜ್ ಆಸ್ಪತ್ರೆಯಾಗಿ ಆರಂಭವಾದ ಈ ಆಸ್ಪತ್ರೆ ಇಂದು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಆ ಕಾಲದಲ್ಲಿ ಶ್ರೀಮಂತರಾಗಲಿ ಬಡವರಾಗಲಿ ಎಲ್ಲರೂ ಇದೇ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದರು. ತಮ್ಮ ಸೇವಾ ಅವಧಿಯಲ್ಲಿ ದಾನಿಗಳ ಸಹಕಾರದಿಂದ ಆಸ್ಪತ್ರೆಯ ಅಭಿವೃದ್ಧಿಗೆ ಸಾಕಷ್ಟು ನೆರವು ದೊರಕಿದೆ ಎಂದು ಹೇಳಿದರು. ಟೀಕೆ-ಟಿಪ್ಪಣಿಗಳು ಕೂಡ ಅಭಿವೃದ್ಧಿಗೆ ಮಾರ್ಗದರ್ಶಕವಾಗುತ್ತವೆ ಎಂದರು.
ಗೌಡ ಸಾರಸ್ವತ ಸಮಾಜ ಕಲ್ಯಾಣ ಸಮಿತಿಯ ಗೌರವಾಧ್ಯಕ್ಷ ನರೇಂದ್ರ ನಾಯಕ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಧರ ವಸಂತ ಶಾನಭಾಗ, ದಿ. ಗೀತಾ ಶಾನಭಾಗ ಅವರ ಸೇವಾ ಮನೋಭಾವವನ್ನು ಸ್ಮರಿಸಿ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ಅವರ ಪತಿ ವಾಮನ ಶಾನಭಾಗ ಅಮೆರಿಕಾದಲ್ಲಿದ್ದರೂ ಹುಟ್ಟೂರಾದ ಭಟ್ಕಳದ ಅಭಿವೃದ್ಧಿಗೆ ಧರ್ಮಕಾರ್ಯಗಳ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ, ಉದ್ಯಮಿ ವಸಂತ ಶಾನಭಾಗ, ಆಡಳಿತ ವೈದ್ಯಾಧಿಕಾರಿ ಡಾ. ಅರುಣ ಕುಮಾರ ಹಾಗೂ ಡಾ. ಸವಿತಾ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಸಂತ ಗಣಪಯ್ಯ ಶಾನಭಾಗ, ಸಹಾಯಕ ಆಯುಕ್ತ ಪ್ರವೀಣ ಕರಾಂಡೆ, ಶಿರಸ್ತೇದಾರ ವಿಜಯಲಕ್ಷ್ಮಿ, ಪ್ರಾಥಮಿಕ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಿಯಾ ಗೊನ್ಸಾಲಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಡಳಿತ ವೈದ್ಯಾಧಿಕಾರಿ ಡಾ. ಅರುಣ ಕುಮಾರ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

More Stories
ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ
ನಗರ ಹಿಂದೂ ಸಂಗಮ ಯಶಸ್ಸಿಗೆಸಹಕರಿಸಿದ ಪೊಲೀಸರಿಗೆ ಧನ್ಯವಾದ
ಮಾರ್ಚ್ 14ರಂದು ಭಟ್ಕಳದಲ್ಲಿ ಮೊದಲ ಲೋಕ್ ಅದಾಲತ್