

ಭಟ್ಕಳ: ತಾಲೂಕಿನ ತೆಂಗಿನಗುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2004-05ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಬ್ಯಾಚ್ ವತಿಯಿಂದ ಭಾವಪೂರ್ಣ ಗುರುವಂದನಾ ಕಾರ್ಯಕ್ರಮ ನಡೆಯಿತು. “ಮಹಾ ಸಂಭ್ರಮ – ಇದು ಗುರು-ಶಿಷ್ಯರ ಪುನರ್ಮಿಲನ” ಎಂಬ ಘೋಷವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ಈ ವೇಳೆ ತಮ್ಮ ಬಾಲ್ಯದಲ್ಲಿ ಅಕ್ಷರಜ್ಞಾನ ನೀಡಿದ ಶಿಕ್ಷಕರಾದ ಎಚ್.ಎನ್. ದೇವಡಿಗ, ದೇವರಾಜ್, ರಾಮಗೌಡ, ದುರ್ಗಯ್ಯ, ಅನಂತ್ ಹಾಗೂ ಶಿಕ್ಷಕಿಯರಾದ ಪದ್ಮಾವತಿ, ಪೂರ್ಣಿಮಾ, ವಿಮಲಾ, ಭಾರತಿ ಮತ್ತು ಪ್ರತಿಮಾ ಅವರನ್ನು ಶಾಲು ಹೊದಿಸಿ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದ ವಿಶೇಷವಾಗಿ ಶಿಷ್ಯರು ಗುರುಗಳನ್ನು ಸನ್ಮಾನಿಸುವುದರ ಜೊತೆಗೆ ಗುರುಗಳೂ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು. ಇದರಿಂದ ಗುರು-ಶಿಷ್ಯರ ನಡುವಿನ ಆತ್ಮೀಯತೆ ಮತ್ತಷ್ಟು ಗಾಢವಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕರು, “ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಹಾಗೂ ಅಕ್ಷರ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಈ ರೀತಿಯಾಗಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.



ಕಾರ್ಯಕ್ರಮದ ಆರಂಭದಲ್ಲಿ ಹಳೆಯ ವಿದ್ಯಾರ್ಥಿಗಳ ಪೈಕಿ ಅಗಲಿದ ದಿವಂಗತ ಜನಾರ್ದನ ದೇವಡಿಗ ಅವರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ಹಾಗೂ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಳೆಯ ವಿದ್ಯಾರ್ಥಿ ಆಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ದೇವಡಿಗ ಸ್ವಾಗತಿಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ