ಕುಮಟಾ: ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಹಿನ್ನೆಲೆ, ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು ಕುಮಟಾ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನವಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟಗಾರರ ಜಾಲವನ್ನು ಬೇಧಿಸಲು ಕುಮಟಾ ಪೊಲೀಸ್ ಠಾಣೆಯವರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಯೂರ ಪಟ್ಟಣಶೆಟ್ಟಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಸಂಗ್ರಹಿಸಿದ ಖಚಿತ ಮಾಹಿತಿಯ ಮೇರೆಗೆ ಕುಮಟಾ ತಾಲೂಕಿನ ಮೂರೂರು ಗುಡ್ಡದ ಕಾಗಾಲ ಮಾನೀರ ಬಳಿ ದಾಳಿ ನಡೆಸಿದ ಪೊಲೀಸರು, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದರು. ಬಂಧಿತರು 21 ವರ್ಷದ ಹೋಟೆಲ್ ಕೆಲಸಗಾರ ಪ್ರಾಂಕ್ಲಿನ್ ಅಂಬೋಜ್ ಡಿಸೋಜಾ, 26 ವರ್ಷದ ಕೋಳಿ ಫಾರ್ಮ್ ಕೆಲಸಗಾರ ನಿಖೀಲ ಪರಶುರಾಮ ಸಾವಂತ ಹಾಗೂ 29 ವರ್ಷದ ಕೂಲಿ ಕಾರ್ಮಿಕ ಮಧುಕೇಶ್ವರ ಜೈ ಬಾದೂರ ಕಾರ್ಗಿ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 1 ಲಕ್ಷ ರೂ. ಮೌಲ್ಯದ ಸುಮಾರು 3 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಸ್ಕೂಟಿ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಗಣೇಶ ನಾಯ್ಕ, ಸಂತೋಷ ಚೆನ್ನಣ್ಣನವರ್, ಪ್ರದೀಪ ನಾಯಕ ಹಾಗೂ ದಯಾನಂದ ನಾಯ್ಕ ಭಾಗವಹಿಸಿದ್ದರು. ಕುಮಟಾ ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ. ಗಿರೀಶ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

More Stories
ತೊರ್ಕೆ ಆನಂದಣ್ಣನಿಗೆ ಬರ್ಗಿ ವಿದ್ಯಾಪೀಠದ ಗೌರವ
ಹಿರೇಗುತ್ತಿಯ ಗಂಗಾಧರ ಬೊಮ್ಮಯ್ಯ ಗಾಂವಕರ ನಿಧನ
ಚಂದ್ರಶೇಖರ ಅಚ್ಯುತ ಗಾಂವಕರ ನಿಧನ