ಹೊನ್ನಾವರ (ಜೂನ್ 14): “ಬನ್ನಂಜೆ ಗೋವಿಂದಾಚಾರ್ಯರ ಮಾತು ಗಂಗಾ ಪ್ರವಾಹದಂತೆ. ಅವರ ವ್ಯಕ್ತಿತ್ವ ಮತ್ತು ಚಿಂತನೆಗಳು ಕಥೆಯಾಗಿ ಉಳಿದು ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಬೇಕು,” ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಕೆಕ್ಕಾರಿನ ರಘೋತ್ತಮ ಮಠದ ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ ಸಭಾಂಗಣದಲ್ಲಿ ಶ್ರೀರಾಮಚಂದ್ರಾಪುರ ಮಠ, ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಹಾಗೂ ಶ್ರೀಮಠದ ಹೊನ್ನಾವರ ಮತ್ತು ಕುಮಟಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಬನ್ನಂಜೆ 90 ವಿಶ್ವನಮನ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬನ್ನಂಜೆ ಅವರ ಮಾತುಗಳಿಗೆ ಆಳ ಮತ್ತು ಅಗಲ ಎರಡೂ ಇರುತ್ತಿದ್ದವು. ಮಕ್ಕಳಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಅವರು ವಿಚಾರ ಮಂಡಿಸುತ್ತಿದ್ದರು. ಗೋಕರ್ಣದಲ್ಲಿ ನಾವು ಬಾಲ್ಯದಲ್ಲಿದ್ದಾಗಲೇ ಅವರ ಪ್ರವಚನಗಳನ್ನು ಕೇಳುತ್ತಿದ್ದೆವು. ಅವರ ವಾಗ್ಮಿತೆ ದೈವಕೃಪೆಯಿಂದ ಲಭಿಸಿದ್ದೇ ಹೊರತು, ಕೇವಲ ಮಾನವ ಪ್ರಯತ್ನದಿಂದ ಸಾಧ್ಯವಾಗುವಂಥದ್ದಲ್ಲ ಎಂದು ಶ್ರೀಗಳು ಬಣ್ಣಿಸಿದರು.
ಆಗಸ್ಟ್ 3 ರಂದು ಬನ್ನಂಜೆ ಬಯೋಪಿಕ್ ಸಿನಿಮಾ ಬಿಡುಗಡೆ
ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯರ 90ನೇ ಜನ್ಮವರ್ಷದ ಅಂಗವಾಗಿ ದೇಶ-ವಿದೇಶಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬನ್ನಂಜೆ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಆಗಸ್ಟ್ 3ರಂದು ಬಿಡುಗಡೆಯಾಗಲಿದ್ದು, ಬಹುಶ್ರುತ ವಿದ್ವಾಂಸರೊಬ್ಬರ ಕುರಿತಾಗಿ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರ ಇದಾಗಿದೆ ಎಂದು ಮಾಹಿತಿ ನೀಡಿದರು.
ಗಣ್ಯರ ನುಡಿನಮನ:
- ವಿದ್ವಾನ್ ರಮೇಶ ವಾಸುದೇವ ಗಮಕಿ: “ಕೇವಲ ಕಲಿಕೆಯಲ್ಲ, ವಿದ್ಯೆಗೆ ಶರಣಾಗಬೇಕು ಎಂಬ ಸಂದೇಶವನ್ನು ಬನ್ನಂಜೆ ಅವರು ನೀಡುತ್ತಿದ್ದರು. ಜ್ಞಾನಾರ್ಜನೆಗೆ ಮಗುವಿನಂತಹ ಕುತೂಹಲವಿರಬೇಕು. ಭಾರತದಲ್ಲಿ ಜ್ಞಾನ ಮತ್ತು ಗಾನ ಒಟ್ಟಿಗೆ ಸಾಗಬೇಕು ಎಂಬುದು ಅವರ ಚಿಂತನೆಯಾಗಿತ್ತು.”
- ಸಾಹಿತಿ ಜಗದೀಶ ಶರ್ಮಾ ಸಂಪ: “ಬನ್ನಂಜೆ ಅವರು ಬಹುಶ್ರುತ ವಿದ್ವಾಂಸರು. ಅವರ ಪ್ರವಚನಗಳ ಧ್ವನಿಗ್ರಹಣವೇ ವಿಶೇಷ. ಒಂದೊಂದು ಪದಕ್ಕೂ ಹತ್ತಾರು ಅರ್ಥವಿಸ್ತಾರ ನೀಡುವ ಶಕ್ತಿ ಅವರ ಅಧ್ಯಯನದ ಫಲವಾಗಿತ್ತು.”
- ಮೋಹನ ಭಾಸ್ಕರ ಹೆಗಡೆ ಹೆರವಟ್ಟ (ಅಧ್ಯಕ್ಷರು, ಶಾಸನ ತಂತ್ರ): “ಬನ್ನಂಜೆ ಅವರು ಭಾವಜೀವಿಯಾಗಿದ್ದರು. ಅನಾರೋಗ್ಯದ ನಡುವೆಯೂ ಕೊಟ್ಟ ಮಾತಿಗೆ ಬದ್ಧರಾಗಿ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದರು.”
- ವೀಣಾ ಬನ್ನಂಜೆ (ಸಂಸ್ಕೃತಿ ಚಿಂತಕಿ): “ಗೋವಿಂದಾಚಾರ್ಯರ ವ್ಯಕ್ತಿತ್ವ ಹಾಗೂ ಕಾರ್ಯಕ್ಷೇತ್ರ ಅತ್ಯಂತ ವಿಸ್ತಾರವಾಗಿದ್ದು, ಅಭಿಮಾನಿಗಳು ಇಂತಹ ಕಾರ್ಯಕ್ರಮಗಳ ಮೂಲಕ ಅವರನ್ನು ಸ್ಮರಿಸುತ್ತಿರುವುದು ಹೆಮ್ಮೆಯ ವಿಷಯ.”
ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಹಿರಿಯ ಕಲಾವಿದ ಪ್ರೊ. ಎಸ್. ಶಂಭು ಭಟ್ಟ ಕಡತೋಕ ಹಾಗೂ ಉದ್ಯಮಿ ಸುಬ್ರಾಯ ಭಟ್ಟ ಕೋಣಾರೆ ಉಪಸ್ಥಿತರಿದ್ದರು. ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿ ಅವರಿಂದ ಬನ್ನಂಜೆ ಹಾಡುಗಬ್ಬ ಕಾರ್ಯಕ್ರಮ ನಡೆಯಿತು. ಅಧ್ಯಾಪಕ ರಾಘವೇಂದ್ರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ವಿಶ್ವಶಾಂತಿ ಸರಣಿಯ ತುಳಸಿ ರೂಪಕಕ್ಕೆ ಜನಮೆಚ್ಚುಗೆ
ಕಾರ್ಯಕ್ರಮದ ಅಂಗವಾಗಿ ವಿಶ್ವಶಾಂತಿ ಸರಣಿಯಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ವಿರಚಿತ ‘ವಿಶ್ವಾಭಿಗಮನಮ್’ ಯಕ್ಷನೃತ್ಯ ರೂಪಕ ಪ್ರದರ್ಶನಗೊಂಡಿತು. ಶಿರಸಿಯ ಯುವ ಕಲಾವಿದೆ ಕು. ತುಳಸಿ ಹೆಗಡೆ ಅವರ ಪ್ರಸ್ತುತಿಯಲ್ಲಿ ಮೂಡಿಬಂದ ಈ ರೂಪಕ ಅಪಾರ ಆಸಕ್ತರನ್ನು ರಂಜಿಸಿತು. ಶ್ರೀಕೃಷ್ಣನ ವ್ಯಕ್ತಿತ್ವ, ರಾಧೆಯ ನಿರ್ಮಲ ಭಕ್ತಿ, ಸೂಕ್ಷ್ಮ ಅಭಿನಯ ಹಾಗೂ ಸುಂದರ ಲಾಸ್ಯಪೂರ್ಣ ಕುಣಿತದ ಮೂಲಕ ಗೋಕುಲ ವಾಸಿಗಳ ಒಡನಾಟ ಹಾಗೂ ಜೀವನ ಆದರ್ಶಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಲಾಯಿತು.
ರೂಪಕದ ಹಿಮ್ಮೇಳದಲ್ಲಿ ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆವಾದಕ ಶಂಕರ ಭಾಗವತ್, ಚಂಡೆವಾದಕ ವಿಘ್ನೇಶ್ವರ ಗೌಡ ಹಾಗೂ ಪ್ರಸಾಧನ ಕಲಾವಿದ ಗಣಪತಿ ಹೆಗಡೆ ಮೂರೂರು ಸಹಕರಿಸಿದರು.
“ವಿಶ್ವದಾದ್ಯಂತ ಬನ್ನಂಜೆ ೯೦ ವಿಶ್ವ ನಮನ ಕಾರ್ಯಕ್ರಮ ನಡೆದಿದೆ. ಬನ್ನಂಜೆ ಅವರು ಈ ಕೆಕ್ಕಾರು ತಪೋಭೂಮಿಯಲ್ಲೂ ಪ್ರವಚನ ನೀಡಿದ್ದರು ಹಾಗೂ ಶ್ರೀಸಂಸ್ಥಾನಕ್ಕೂ ಆಪ್ತರಾಗಿದ್ದರು. ಕೆಕ್ಕಾರಿನಲ್ಲೂ ಈ ಕಾರ್ಯಕ್ರಮ ನಡೆದು, ಜಾಗತಿಕ ಕಾರ್ಯಕ್ರಮಗಳ ಪಟ್ಟಿಗೆ ಈ ಕ್ಷೇತ್ರ ಸೇರ್ಪಡೆ ಆದಂತಾಗಿದೆ.”
— ಮೋಹನ ಭಾಸ್ಕರ ಹೆಗಡೆ, ಅಧ್ಯಕ್ಷರು ಶಾಸನತಂತ್ರ, ಶ್ರೀರಾಮಚಂದ್ರಾಪುರ ಮಠ“ಶ್ರೀಸಂಸ್ಥಾನದ ಮೇಲೆ ಮಿಥ್ಯ ಆರೋಪ ಬಂದಾಗ ಶ್ರೀಗಳ ಪರವಾಗಿ ಜೊತೆಗೆ ನಿಂತವರು ಅಪ್ಪ ಬನ್ನಂಜೆ ಅವರು. ಅವರಿಗೆ ಯಾವುದು ಸತ್ಯ, ಯಾವುದು ಮಿಥ್ಯ ಎಂಬುದು ಗೊತ್ತಿತ್ತು. ಶ್ರೀಗಳ ಗೋಸೇವೆಯನ್ನು ಸಂತರೊಬ್ಬರ ಬಹಳ ದೊಡ್ಡ ಕಾರ್ಯ ಎಂದು ಅವರು ಸದಾ ಮೆಚ್ಚಿಕೊಂಡಿದ್ದರು.”
— ವೀಣಾ ಬನ್ನಂಜೆ, ಖ್ಯಾತ ಸಂಸ್ಕೃತಿ ಚಿಂತಕಿ“ಶ್ರೀಕೃಷ್ಣ ಸಂಧಾನಕ್ಕೆ ಉಪಪ್ಲಾವ್ಯದಿಂದ ಹೊರಟಾಗ ಸ್ವತಃ ಮಹರ್ಷಿಗಳೇ ಬಂದಿದ್ದರು. ಹಾಗೆ ಬಂದವರಿಗೆ ವಿಶ್ವರೂಪದರ್ಶನವಾಗಿತ್ತು. ಹಾಗೆಯೇ ಬನ್ನಂಜೆ ಅವರ ಪ್ರವಚನಗಳಿಗೆ ಬಂದವರಿಗೂ ಸಾಕ್ಷಾತ್ ವಿಶ್ವ ರೂಪ ದರ್ಶನವೇ ಆಗುತ್ತಿತ್ತು.”
— ವಿದ್ವಾನ್ ಜಗದೀಶ್ ಶರ್ಮಾ ಸಂಪ

More Stories
ಬರೋಬ್ಬರಿ ₹17 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ; ಇಬ್ಬರು ಖದೀಮರನ್ನು ಹೆಡೆಮುರಿ ಕಟ್ಟಿದ ಪೊಲೀಸರು
ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ರೂ. 14 ಲಕ್ಷ ವೆಚ್ಚದ ಸಿಎಸ್ಆರ್ ಶೌಚಾಲಯ ಉದ್ಘಾಟನೆ
ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವರ್ಷದ ಅತ್ಯುತ್ತಮ ICSE ಶಾಲಾ ಪ್ರಶಸ್ತಿಯನ್ನು ಪಡೆದಿರುತ್ತದೆ.