ಹಳಿಯಾಳ/ದಾಂಡೇಲಿ:
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಸಾಗಿಸಲು 108 ಆಂಬುಲೆನ್ಸ್ ಸಿಗದೆ ಮೃತಪಟ್ಟ ದುಃಖದ ಘಟನೆ ಭಾನುವಾರ ಬೆಳಗ್ಗಿನ ಜಾವ ನಡೆದಿದೆ. ಸುಮಾರು ಎರಡು ಮೂರು ಗಂಟೆಗಳ ಕಾಲ ಆಂಬುಲೆನ್ಸ್ ಸಿಗದೆ ರೋಗಿ ನರಳಿ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಕುಟುಂಬದವರ ಮಾಹಿತಿ ಪ್ರಕಾರ, ರೋಗಿಯನ್ನು ರಾತ್ರಿ ಸುಮಾರು ನಾಲ್ಕು ಗಂಟೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಸಾಗಿಸಲು 108 ಆಂಬುಲೆನ್ಸ್ ಬೇಕಾಗಿತ್ತು. ಆದರೆ ,ಸುಮಾರು ಮೂರು ಗಂಟೆಗಳ ಕಾಲ ಆಂಬುಲೆನ್ಸ್ ವ್ಯವಸ್ಥೆ ಸಿಗದ ಕಾರಣ ರೋಗಿಯ ಆರೋಗ್ಯ ಸ್ಥಿತಿ ಹದಗೆಟ್ಟು ಕೊನೆಗೆ ಸಾವನ್ನಪ್ಪಿದ್ದಾರೆ.
ನನ್ನ ತಂದೆಯಾದ ಬಸ್ಟ್ಯಾಂನ್ ಸಂತಾನ ಬ್ರೀಗ್ಯಾಜಾ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಸೇನಾ ಅಧಿಕಾರಿ. ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಬದುಕುವ ಸಾಧ್ಯತೆ ಇತ್ತು. ಆದರೆ ಆಂಬುಲೆನ್ಸ್ ಸಿಗದ ಕಾರಣ ಈ ದುರ್ಘಟನೆ ನಡೆದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಮೃತರ ಮಗ ಕಣ್ಣೀರು ಹಾಕಿದರು.
ಇದೇ ವೇಳೆ ಸ್ಥಳೀಯ ಆಸ್ಪತ್ರೆಯಲ್ಲೂ ಕಳೆದ 15 ದಿನಗಳಿಂದ 108 ಆಂಬುಲೆನ್ಸ್‌ನಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ವಿಚಾರಿಸಿದಾಗ ಆಂಬುಲೆನ್ಸ್ ಚಾಲಕರು “ಆಕ್ಸಿಜನ್ ಕೊರತೆಯಿಂದ ದೂರದ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ ಎಂದು ಚಾಲಕ ತಿಳಿಸಿದ್ದಾರೆ.
ದಾಂಡೇಲಿ ಹಾಗೂ ಹಳಿಯಾಳ ಸರ್ಕಾರಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಆಂಬುಲೆನ್ಸ್ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ತುರ್ತು ಸಂದರ್ಭದಲ್ಲಿ ಕರೆ ಮಾಡಿದರೂ ಕೆಲವೊಮ್ಮೆ 108 ಆಂಬುಲೆನ್ಸ್ ಒಂದು ಅಥವಾ ಎರಡು ಗಂಟೆಗಳ ನಂತರ ಮಾತ್ರ ಸ್ಥಳಕ್ಕೆ ಬರುತ್ತದೆ ಎನ್ನಲಾಗಿದೆ.
ಇದಲ್ಲದೆ ಆಂಬುಲೆನ್ಸ್‌ನಲ್ಲಿ ಒಂದು ಶಿಫ್ಟ್‌ನಲ್ಲಿ ಮಾತ್ರ ನರ್ಸ್ ಇದ್ದು, ಉಳಿದ ಶಿಫ್ಟ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಇರುವುದೂ ಗಮನಕ್ಕೆ ಬಂದಿದೆ.
108 ಆಂಬುಲೆನ್ಸ್ ಸೇವೆಯನ್ನು ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಳಿಯಾಳ–ದಾಂಡೇಲಿ ಭಾಗದಲ್ಲಿ ಕಳೆದ ಎರಡು ದಿನಗಳ ಅಂತರದಲ್ಲಿ ಇಬ್ಬರು ರೋಗಿಗಳು ಆಂಬುಲೆನ್ಸ್ ಸಮಸ್ಯೆಯಿಂದ ಪರದಾಡಿರುವ ಘಟನೆಗಳು ನಡೆದಿರುವುದಾಗಿ ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಒಂದಿಲ್ಲಾ ಒಂದು ಅಂಬುಲೆನ್ಸ್ ಇರಲೇಬೇಕು ಆದರೆ, ಎರಡು ಅಂಬುಲೆನ್ಸ್ ಇಲ್ಲದಿರುವುದು ನೋಡಿದೆ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದು ತಿಳಿಯುತ್ತದೆ.ಈ ಹಿನ್ನೆಲೆ ತುರ್ತು ಆರೋಗ್ಯ ಸೇವೆಗಳನ್ನು ತಕ್ಷಣ ಸುಧಾರಿಸಲು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

More Stories