September 10, 2026

ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ; ಮಾರ್ಚ್ 26–27 ಧಾರ್ಮಿಕ ಕಾರ್ಯಕ್ರಮ


ಭಟ್ಕಳ: ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಕಟ್ಟಡವನ್ನು ನೂತನ ಶಿಲಾಮಯವಾಗಿ ಜೀರ್ಣೋದ್ಧಾರ ಮಾಡುವ ಪ್ರಕ್ರಿಯೆಗೆ ಮೊದಲ ಹಂತವಾಗಿ ಕಲಾವಿಸರ್ಜನೆ ಹಾಗೂ ಶ್ರೀ ದೇವಿಯ ಮೂಲ ಸನ್ನಿಧಿಯನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಧಾರ್ಮಿಕ ಕಾರ್ಯಕ್ರಮವು ಮಾರ್ಚ್ 26 ಮತ್ತು 27 ರಂದು ನಡೆಯಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿದಾಸ ಮೋಗೇರ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಲಕ್ಷಾಂತರ ಭಕ್ತರ ಆರಾಧ್ಯ ದೇವಿಯಾಗಿರುವ ಶ್ರೀ ಮಹಾಸತಿ ದೇವಿಯ ದೇವಸ್ಥಾನವನ್ನು ಪುನರ್‌ನಿರ್ಮಾಣ ಮಾಡಲು ಉಭಯ ಗ್ರಾಮಸ್ಥರು ತೀರ್ಮಾನಿಸಿದ್ದು, ಸರ್ಕಾರದ ಅನುಮತಿಯೊಂದಿಗೆ ಕಾರ್ಯಾರಂಭ ಮಾಡಲಾಗಿದೆ” ಎಂದು ಹೇಳಿದರು.


ಗರಿಗೆಮಠದ ಆಗಮ ಪ್ರವೀಣ ಶೈವಸಿದ್ಧಾಂತಿ ಶ್ರೀ ವೇ.ಮೂ. ರಾಮ ಪ್ರಸಾದ ಅಡಿಗರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಾರ್ಚ್ 26ರಂದು ಸಂಜೆ ಬಾಲಾಲಯದಲ್ಲಿ ವಾಸ್ತು-ರಾಕ್ಷೋಘ್ನ ಹೋಮ, ಪೂಜಾ ಬಲಿ, ಪ್ರಸಾದ ಶುದ್ಧಿ-ರಕ್ಷೆ, ಕಲಾವಿಸರ್ಜನಾಂಗ ಹೋಮ ಹಾಗೂ ಜೀವಕುಂಭ ಸ್ಥಾಪನೆ ನಡೆಯಲಿದೆ.
ಮಾರ್ಚ್ 27ರಂದು ಬೆಳಿಗ್ಗೆ 6.31ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವತಾ ಪ್ರತಿಷ್ಠೆ, ಪ್ರತಿಷ್ಠಾಂಗ ಹೋಮ, ಕಲಶಾಭಿಷೇಕ ಮತ್ತು ಮಹಾಪೂಜೆ ನೆರವೇರಲಿದ್ದು, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗರಾಜ ಈ.ಎಚ್. ಮಾತನಾಡಿ, “ಹಳೆಯ ಮೂರ್ತಿಗಳನ್ನು ಅದೇ ರೀತಿಯಲ್ಲಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ, ನಂತರ ದೇವಸ್ಥಾನದ ಹರಕೆ ಹಾಗೂ ಸೇವೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ” ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅಚ್ಯುತ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಸದಸ್ಯರಾದ ಆರ್.ಜೆ. ನಾಯ್ಕ, ಶೇಖರ ನಾಯ್ಕ, ಡಿ.ಎಲ್. ನಾಯ್ಕ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರಾದ ಗುರುದಾಸ ಮೋಗೇರ, ಮೋಹನ ನಾಯ್ಕ, ಮಾದೇವ ನಾಯ್ಕ, ತಿಮ್ಮಪ್ಪ ನಾಯ್ಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

About The Author

error: Content is protected !!