March 29, 2026

ಮಕ್ಕಳಲ್ಲಿ ವಿಜ್ಞಾನ ತಂತ್ರಜ್ಞಾನದ ಅರಿವು ಮೂಡಿಸಬೇಕು: ಡಾ. ಎ.ಎಸ್. ಕಿರಣ್ ಕುಮಾರ್


ಹೊನ್ನಾವರ, ಮಾ.27: ವಿಜ್ಞಾನ ಮತ್ತು ತಂತ್ರಜ್ಞಾನವು ಇಂದಿನ ಮಾನವನ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಹೊರತುಪಡಿಸಿದ ಜೀವನವನ್ನು ಊಹಿಸುವುದೇ ಅಸಾಧ್ಯ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಆಯೋಜಿಸಲಾದ ‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ 2026’ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.


ಸ್ವಾತಂತ್ರ್ಯಾನಂತರ ದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ, ಬಡತನ ನಿರ್ಮೂಲನೆ ಹಾಗೂ ಜನಜೀವನ ಸುಧಾರಣೆ ಪ್ರಮುಖ ಸವಾಲಾಗಿದ್ದರೂ, ಭಾರತೀಯ ವಿಜ್ಞಾನಿಗಳ ಶ್ರಮದಿಂದ ಅಲ್ಪಾವಧಿಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶವು ಗಮನಾರ್ಹ ಸಾಧನೆ ಮಾಡಿದೆ. ಇತ್ತೀಚೆಗೆ ಭಾರತದ ಬಾಹ್ಯಾಕಾಶ ಸಾಧನೆಗಳು ವಿಶ್ವದ ಗಮನ ಸೆಳೆಯುತ್ತಿವೆ ಎಂದು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರ ಜೀವನ ವಿಜ್ಞಾನ-ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಆವಿಷ್ಕಾರಗಳು ನಡೆಯಬೇಕಾದರೆ ಮಕ್ಕಳಲ್ಲಿ ವಿಜ್ಞಾನ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವುದು ಅತ್ಯಂತ ಮುಖ್ಯ ಎಂದು ಅವರು ಒತ್ತಿ ಹೇಳಿದರು.
ಶ್ರೀ ಮಾರುತಿ ಗುರೂಜಿ ಅವರ ಸೇವೆಯನ್ನು ಶ್ಲಾಘಿಸಿದ ಅವರು, ಬಂಗಾರಮಕ್ಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಧ್ಯಾತ್ಮಿಕತೆ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಮಾದರಿಯಾಗಿದೆ ಎಂದರು. ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ‘ಸಂಸ್ಕೃತಿ ಕುಂಭ’ ಉತ್ಸವದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನಗಳ ಮೂಲಕ ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪಶ್ಚಿಮ ಘಟ್ಟಕ್ಕೆ ಹಾನಿಕಾರಕವಾಗಿದ್ದು, ಅದರ ವಿರುದ್ಧ ಮಾರುತಿ ಗುರೂಜಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮಿ ಮಹಾಪೀಠದ ಶ್ರೀ ಯೋಗೀಶ್ವರ ಮಹಾಸ್ವಾಮಿಗಳು ಉಪದೇಶ ನೀಡಿ, ‘ನಾನು-ನನ್ನದು’ ಎಂಬ ಮನೋಭಾವ ಬಿಟ್ಟು ‘ನಾವು-ನಮ್ಮದು’ ಎಂಬ ಸಮೂಹ ಚಿಂತನೆ ಬೆಳೆಸಿದಾಗ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ವಹಿಸಿದ್ದರು.


ಉದ್ಯಮಿ ಮಾಸ್ತಪ್ಪ ನಾಯ್ಕ, ಸಂವತ್ಸರ, ಸುನೀತಾ ಹೆಗಡೆ, ಮಹೇಶ ನಾಯ್ಕ, ಮಂಜುನಾಥ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತೃಪ್ತಿ ಮತ್ತು ಪಾವಣಿ ಪ್ರಾರ್ಥನೆಗೈದರು. ನೂರ್ ಅಹ್ಮದ್ ಸ್ವಾಗತಿಸಿದರು. ಗಣಪತಿ ಹೆಗಡೆ ಧನ್ಯವಾದ ಸಲ್ಲಿಸಿದರು.

About The Author

error: Content is protected !!