May 14, 2026

ಭಟ್ಕಳದಲ್ಲಿ ಮೇ 15ರಿಂದ ಬೃಹತ್ ಹಲಸು-ಹಣ್ಣಿನ ಮೇಳ

ಭಟ್ಕಳ: ಸ್ಪಂದನ ಭಟ್ಕಳ, ರಂಜನ್ ಇಂಡೇನ್ ಏಜೆನ್ಸಿ ಭಟ್ಕಳ ಹಾಗೂ ಬೆನಕ ಇವೆಂಟ್ಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಹಲಸು ಮತ್ತು ಹಣ್ಣಿನ ಮೇಳವು ಮೇ 15ರಿಂದ 18ರವರೆಗೆ ಭಟ್ಕಳದಲ್ಲಿ ನಡೆಯಲಿದ್ದು, ವಿವಿಧ ಜಿಲ್ಲೆಗಳ ವಿಶೇಷ ಉತ್ಪನ್ನಗಳು ಹಾಗೂ ಆಹಾರ ಮೇಳ ವೈವಿಧ್ಯತೆಯೊಂದಿಗೆ ಜನಮನ ಸೆಳೆಯಲಿದೆ ಎಂದು ಸ್ಪಂದನ ಉಪಾಧ್ಯಕ್ಷ ಭವಾನಿಶಂಕರ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಮೇಳದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ಥಳೀಯ ರೈತರು ಮತ್ತು ಸ್ವಯಂ ಉದ್ಯೋಗಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಹಲಸಿನ ವಿವಿಧ ಉತ್ಪನ್ನಗಳು, ಮಾವು ಸೇರಿದಂತೆ ಅನೇಕ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಿಂದ ರೈತರು ಹಾಗೂ ವ್ಯಾಪಾರಿಗಳು ಭಾಗವಹಿಸಲಿದ್ದಾರೆ ಎಂದರು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಖರೀದಿಸುವ ಅವಕಾಶವೂ ಮೇಳದಲ್ಲಿ ದೊರೆಯಲಿದೆ ಎಂದು ಹೇಳಿದರು.

ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತರಾಮ ಮಾತನಾಡಿ, ಹಲಸು ಕೇವಲ ಹಣ್ಣು ಮಾತ್ರವಲ್ಲ, ಆರೋಗ್ಯಕರ ಆಹಾರ ಸಂಸ್ಕೃತಿಯ ಪ್ರತೀಕವಾಗಿದೆ. ಹಲಸಿಗೆ ಮಾರುಕಟ್ಟೆಯಲ್ಲಿ ಸೂಕ್ತ ಮೌಲ್ಯ ದೊರಕಿಸಿಕೊಡುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದ್ದು, ಗ್ರಾಮೀಣ ಉತ್ಪನ್ನಗಳಿಗೆ ನಗರ ಪ್ರದೇಶಗಳಲ್ಲಿ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆಯಿದೆ ಎಂದರು.

ಆಯೋಜಕ ಗಣೇಶ ಶೆಟ್ಟಿ ಮಾತನಾಡಿ, ಮೇಳದಲ್ಲಿ ಹಲಸಿನ ಚಿಪ್ಸ್, ಹಲಸಿನ ಹಪ್ಪಳ, ಹಲಸಿನ ಬಿರಿಯಾನಿ, ಹಲಸಿನ ಮಂಚೂರಿ, ಮುಳಕ ಸೇರಿದಂತೆ ಹಲವಾರು ವಿಶೇಷ ಖಾದ್ಯಗಳು ಲಭ್ಯವಿರಲಿವೆ ಎಂದು ಮಾಹಿತಿ ನೀಡಿದರು. ಜೊತೆಗೆ ಮಾವಿನ ವಿವಿಧ ತಳಿಗಳ ಸ್ಟಾಲ್‌ಗಳು, ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಸೀರೆಗಳು, ಕರಕುಶಲ ವಸ್ತುಗಳು ಹಾಗೂ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ ಎಂದರು.

ಮೇಳದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂರು ಸೆಲ್ಫಿಗಳಿಗೆ ಇಳಕಲ್ ಸೀರೆ ಬಹುಮಾನ ನೀಡಲಾಗುವುದು. ಜೊತೆಗೆ ಮೇಳದ ಫೋಟೋವನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವವರಿಗೆ ಸಹ ವಿಶೇಷ ಬಹುಮಾನಗಳಿವೆ ಎಂದು ತಿಳಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದರು.

About The Author

error: Content is protected !!