May 12, 2026

ಮುಂಗಾರು ಮುನ್ನ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಎಸಿ ಸೂಚನೆ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಅಸಮಾಧಾನದ ನಡುವೆಯೇ ಸಹಾಯಕ ಆಯುಕ್ತ ಜಿ. ಮಹೇಶ್ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ಚುರುಕುಗೊಳಿಸಲು ಸೂಚನೆ ನೀಡಿದರು.
ತಾಲೂಕು ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಟ್ಕಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಸ್ತುತ ಸ್ಥಿತಿ, ಬಾಕಿ ಉಳಿದಿರುವ ಕಾಮಗಾರಿಗಳು, ಮುಂಗಾರು ಆರಂಭಕ್ಕೂ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸಾರ್ವಜನಿಕರಿಂದ ಬಂದಿರುವ ದೂರುಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು.

ಹೆದ್ದಾರಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಶೀಘ್ರ ಪರಿಹರಿಸಲು ಸಂಬAಧಿತ ಅಧಿಕಾರಿಗಳಿಗೆ ಸೂಚಿಸಿದ ಸಹಾಯಕ ಆಯುಕ್ತರು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶಿಸಿದರು. ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದAತೆ ಕಾಮಗಾರಿಯನ್ನು ವೇಗಗೊಳಿಸಬೇಕು ಎಂದು ಹೇಳಿದರು.

ಸಭೆಯ ಬಳಿಕ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳು ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚತುಷ್ಪಥ ಕಾಮಗಾರಿ ನಿಧಾನಗತಿಯಲ್ಲಿರುವುದು ಹಾಗೂ ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಹೆದ್ದಾರಿ ಪಕ್ಕದಲ್ಲಿ ಸಮರ್ಪಕ ಮಳೆ ನೀರು ಹರಿವಿನ ವ್ಯವಸ್ಥೆ ಇಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಯಿತು. ಮಳೆ ಆರಂಭವಾದರೆ ಹೆದ್ದಾರಿಯಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರ ಜತೆಗೆ ಸಮೀಪದ ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗುವ ಭೀತಿ ಇದೆ ಎಂದು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು.
ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮುಂಗಾರು ಆರಂಭಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಒತ್ತಾಯಿಸಿದರು.

ತಹಶೀಲ್ದಾರ ನಾಗೇಂದ್ರ ಕೋಳ ಶೆಟ್ಟಿ, ಡಿವೈಎಸ್ಪಿ ಬಿ. ಗಿರೀಶ್, ನಗರಸಭೆ ಪೌರಾಯುಕ್ತ ಬಾಬಾಸಾಹೇಬ್ ಮಾನೆ, ಐಆರ್‌ಬಿ ಅಧಿಕಾರಿಗಳು ಹಾಗೂ ತಂಝೀಮ್ ಪ್ರತಿನಿಧಿಗಳು ಪರಿಶೀಲನೆಯಲ್ಲಿ ಭಾಗವಹಿಸಿದ್ದರು.

About The Author

error: Content is protected !!