March 29, 2026

ಸಂಸ್ಕೃತ ಕುಂಭ – ಮಲೆನಾಡ ಉತ್ಸವ 2026, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ‘ಸಾಹಿತ್ಯೋತ್ಸವ’ ಕಾರ್ಯಕ್ರಮ

ಸಾಹಿತ್ಯ ಆಧ್ಯಾತ್ಮಿಕತೆ ಬೇರೆ ಬೇರೆಯಲ್ಲ: ಶ್ರೀ ಸ್ವಾಮಿ ಡಾ. ಮಧುಸೂದನಂದಪುರಿ

ಹೊನ್ನಾವರ: ಸಾಹಿತ್ಯ ಕಾರ್ಯಕ್ರಮಗಳು ವೇದಿಕೆಗೆ ಸೀಮಿತವಾಗದೆ ಪ್ರತಿಯೊಬ್ಬರ ಜೀವನದಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ವೈಯಕ್ತಿಕ ಜೀವನದಲ್ಲಿ ಜವಾಬ್ದಾರಿಯನ್ನು ಹೆಚ್ಚುಸುವ ಕಾರ್ಯಕ್ರಮವಾಗಿ ಮಾರ್ಪಡಬೇಕು ಎಂದು ಬೆಂಗಳೂರು ಓಂಕಾರ ಆಶ್ರಮ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಸ್ವಾಮಿ ಡಾ. ಮಧುಸೂದನಂದಪುರಿ ಅವರು ಸಲಹೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ – 2026’ ಇದರ ಎರಡನೇ ದಿನವಾದ ಶನಿವಾರ ಬೆಳಗ್ಗೆ ನಡೆದ ಸಾಹಿತ್ಯೋತ್ಸವ ಸಮಾರಂಭದಲ್ಲಿ ಅನುಗ್ರಹ ಸಾನಿಧ್ಯ ವಹಿಸಿ ಮಾತನಾಡಿದರು.

ಪುಸ್ತಕಗಿಂತ ಉತ್ತಮವಾದ ಸ್ನೇಹಿತ ಬೇರೊಂದಿಲ್ಲ. ಸಾಹಿತ್ಯದೊಂದಿಗೆ ನಾವು ಬೆರೆತಾಗ ಸಜ್ಜನ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಸಮಾಜದಲ್ಲಿ ಗೌರವವನ್ನು ಪಡೆದುಕೊಳ್ಳವುದು. ಜೊತೆಗೆ ಸಾಹಿತ್ಯ ಅಭಿರುಚಿಯನ್ನು ಬೆಳೆಸುವುದರ ಮೂಲಕ ನಾಡು ನುಡಿಯನ್ನು ಉಳಿಸಿ ಬೆಳೆಸುವ ಕೆಲಸವೂ ನಡೆಯುತ್ತದೆ ಎಂದು ಅವರು ಹೇಳಿದರು.

ಬಂಗಾರಮಕ್ಕಿ ಶ್ರೀ ಕ್ಷೇತ್ರದ ಮಾರುತಿ ಗುರೂಜಿ ಅವರು ಒಂದು ಚೌಕಟ್ಟಿಗೆ ಸೀಮಿತವಾಗದೆ, ಎಲ್ಲರನ್ನೂ ಒಂಗ್ಗೂಡಿಸಿ ಸರ್ವ ವ್ಯಾಪ್ತಿಗೆ ತನ್ನ ಕಾರ್ಯವನ್ನು ವಿಸ್ತರಿಸಿದ್ದಾರೆ. ಇದು ಸನಾತನ ಧರ್ಮದ ಮೂಲ ತತ್ವವಾಗಿದೆ. ತಾನು ಯಾವುದೇ ಕೀರ್ತಿಯನ್ನು ಬಯಸದೆ ನಾಡಿನ ಕೀರ್ತಿ, ಜನತೆಯ ಒಳಿತನ್ನು ಬಯಸುತ್ತಾ ಅವರು ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರುತಿ ಗುರೂಜಿಯ ಸಾನಿಧ್ಯ ಲಭಿಸಿರುವುದು ಈ ನಾಡಿನ ಭಾಗ್ಯವಾಗಿದೆ ಎಂದು ಅವರು ಹೇಳಿದರು.

ಶಿವಮೊಗ್ಗ ಶ್ರೀ ರಾಮಕೃಷ್ಣ ಆಶ್ರಮದ ಶ್ರಿ ಸ್ವಾಮಿ ವಿನಯಾನಂದ ಸರಸ್ವತಿ ಅವರು ಉಪದೇಶ ನೀಡಿ, ಸಾಹಿತ್ಯ ಜನರ ಮಧ್ಯೆ ಸತ್ಯ ಮತ್ತು ಜಾಗೃತಿಯನ್ನು ಮೂಡಿಸಬೇಕು. ಸಾಹಿತ್ಯ ಮತ್ತು ಆಧ್ಯಾತ್ಮಿಕತೆ ಒಂದೇ ಆಗಿವೆ. ಸಾಹಿತ್ಯ, ಸಂಗೀತ, ಕಲೆ ಮಾನವರ ಹಿತಕ್ಕಾಗಿ ಇದ್ದು, ಅವು ಮಾನವರಿಗೆ ಒಳಿತನ್ನು ಬಯಸುತ್ತದೆ. ಮಾನವರಿಗೆ ಒಳಿತನ್ನು ಬಯಸುವ ಸರ್ವವೂ ಆಧ್ಯಾತ್ಮಿಕತೆಯ ಬೇರುಗಳಾಗಿವೆ ಎಂದು ಅವರು ಹೇಳಿದರು.

ಆಧ್ಯಾತ್ಮಿಕತೆಯ ತತ್ವಾದರ್ಶದ ಮೇಲೆ ನಿಂತಿರುವುದರಿAದ ಭಾರತದ ಸಾಹಿತ್ಯ, ಸಂಗೀತ, ಕಲೆಗೆ ಪ್ರಪಂಚದಲ್ಲಿ ಮಹತ್ವ ಇರಲು ಕಾರಣವಾಗಿದೆ. ಆಧ್ಯಾತ್ಮಿಕತೆಯ ಮೂಲ ಇಲ್ಲದ ಪ್ರಪಂಚದ ಎಲ್ಲಾ ಸಾಹಿತ್ಯ ಪರಂಪರೆ ನಾಶವಾಗಿವೆ ಎಂದು ಅವರು ಹೇಳಿದರು.

ಸಾಹಿತ್ಯದ ಕೃಷಿ ಋಷಿಗಳಿಂದಲೇ ಉಗಮವಾಗಿದೆ. ಪುರಾತನ ಕಾಲದಲ್ಲಿ ದೇವಸ್ಥಾನಗಳು ಸಾಹಿತ್ಯ, ಸಂಗೀತ, ಕಲೆಯ ನೆಲೆಯಾಗಿತ್ತು. ಕಾಲ ಕಳೆದಂತೆ ಇವುಗಳಿಂದ ದೇವಸ್ಥಾನಗಳು ಅಂತರ ಪಡೆದುಕೊಂಡಿದೆ. ಮತ್ತೆ ದೇವಸ್ಥಾನಗಳು ಈ ಕಾರ್ಯದಲ್ಲಿ ತೊಡಗುವಂತಾಗಬೇಕು. ಶ್ರೀ ಮಾರುತಿ ಗುರೂಜಿ ಅವರಿಂದ ಈ ಮಹತ್ವದ ಕೆಲಸ ನಡೆಯುತ್ತಿದ್ದು ಇದು ಒಬ್ಬರಿಂದ ಆಗಬೇಕಾದ ಕೆಲಸವಲ್ಲ. ನಾಡಿನ ಜನರು ಒಗ್ಗೂಡುವ ಮೂಲಕ ಆಗಬೇಕಾದ ಕೆಲಸ ವಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಛಲವಾದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು. ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ದಿವ್ಯ ಸಾನಿಧ್ಯ ವಹಿಸಿ ಉಪದೇಶ ನೀಡಿದರು. ಲೇಖಕ, ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ್ ದಾಂಡೇಲಿ, ಡಾ. ಜಿ.ಜಿ.ಹೆಗಡೆ ಬಾಳಗೋಡ ಸುಮುಖಾನಂದ ಜಲವಳ್ಳಿ, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಡಾ. ಆರ್.ಜಿ.ಗುಂದಿ ಅಂಕೋಲ, ಕೆ.ಟಿ.ಶ್ರೀಮತಿ ಮೈಸೂರು, ಪ್ರೊ. ಫಾಲ್ಗುಣ ಗೌಡ ಅಂಕೋಲ, ನಿವೃತ್ತ ಉಪನ್ಯಾಸಕ ಸುರೇಶ್ ಕಡೆಮನೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ‘ವೀರಾಂಜನೇಯ ಶತಕ’, ‘ಹಾಡಿನ ಪಟ್ಟಿ’, ‘ಅಕ್ಷರೋಪಾಯನ’, ‘ಭಾರತ ರತ್ನಗಳು’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇತ್ರ ಬಂಗಾರಮಕ್ಕಿಯಿAದ ಪ್ರತೀ ವರ್ಷ ಸಾಧಕರಿಗೆ ನೀಡುವ ‘ಜಾನಪದ’ ಪ್ರಶಸ್ತಿಯನ್ನು ಪ್ರೊ. ಫಾಲ್ಗುಣ ಗೌಡ ಅಂಕೋಲ ಅವರಿಗೆ ನೀಡಿ ಗೌರವಿಸಲಾಯಿತು.

ಅನುಸೂಯಾ ಜಹಗೀರದಾರ ಕೊಪ್ಪಳ, ನಾಗರತ್ನ ಲೋಕೇಶ, ಚಿತ್ರನಟ ಪ್ರೇಮಾನಂದ ಗವಾಸ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಗಣಪತಿ ಹೆಗಡೆ ಸ್ವಾಗತಿಸಿದರು. ಭರತ್ ಶಂಖನಾದ ಗೈದರು. ಶೈಲೇಶ್, ಭಾರತಿ, ಸೌಮ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

About The Author

error: Content is protected !!