ಕೃಷ್ಣರಾಜಪೇಟೆ: ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು, ಸಂಪೂರ್ಣ ಏಕಾಗ್ರತೆಯಿಂದ ಅಭ್ಯಾಸ ಮಾಡಿ ತಮ್ಮ ಜೀವನದ ಗುರಿಯನ್ನು ಸಾಧಿಸಬೇಕು ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ (ಎಸಿ) ಕೆ.ಆರ್.ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಶಾಲಾ ಪರಿಕರಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು

ಸರ್ಕಾರಿ ಶಾಲೆಗಳ ಉಳಿವಿಗಾಗಿ ದೃಢ ಸಂಕಲ್ಪ ಅಗತ್ಯ:
ಇದೇ ವೇಳೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಅವರು, “ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾಬುದ್ಧಿ ಹಾಗೂ ಜ್ಞಾನದ ಬೆಳಕನ್ನು ನೀಡಿ ಬದುಕಿಗೆ ಮಾರ್ಗದರ್ಶಿಯಾಗಿರುವ ಸರ್ಕಾರಿ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಲು ನಾವೆಲ್ಲರೂ ದೃಢ ಸಂಕಲ್ಪ ಮಾಡುವುದು ಇಂದಿನ ಅನಿವಾರ್ಯತೆಯಾಗಿದೆ. ಸಮಾಜದಲ್ಲಿ ಉಳ್ಳವರು ಹಾಗೂ ದಾನಿಗಳು ತಮ್ಮ ಕೈಲಾದ ನೆರವನ್ನು ಧಾರಾಳವಾಗಿ ನೀಡುವ ಮೂಲಕ ಈ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು” ಎಂದು ಕೈಮುಗಿದು ಮನವಿ ಮಾಡಿದರು.
ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ:
“ನಾನು ನನ್ನ ಹುಟ್ಟುಹಬ್ಬವನ್ನು ವ್ಯರ್ಥವಾಗಿ ಹಣ ಖರ್ಚು ಮಾಡಿ ಆಚರಿಸಿಕೊಳ್ಳುವ ಬದಲಿಗೆ, ಆ ಹಣದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಅಗತ್ಯ ಪರಿಕರಗಳನ್ನು ಕೊಡಿಸಿದ್ದೇನೆ. ಮಕ್ಕಳೊಂದಿಗೆ ಅತ್ಯಂತ ಸರಳ ಹಾಗೂ ಸುಂದರವಾಗಿ ಜನ್ಮದಿನ ಆಚರಿಸಿಕೊಂಡಿರುವುದು ನನಗೆ ಆತ್ಮಸಂತೋಷ ತಂದಿದೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಮುರುಕನಹಳ್ಳಿ ಗ್ರಾಮಸ್ಥರು, ಎಸ್‌ಡಿಎಂಸಿ ಹಾಗೂ ಶಿಕ್ಷಕ ವೃಂದಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದು ಶ್ರೀನಿವಾಸ್ ಅಭಿಮಾನದಿಂದ ನುಡಿದರು.

ಆಂಗ್ಲ ಭಾಷಾ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಸೇರಿಸಿ:
ಕೆ.ಆರ್.ಪೇಟೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ರವಿಕುಮಾರ್ ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣ ಉಚಿತವಾಗಿ ದೊರೆಯುತ್ತಿದ್ದರೂ, ಪೋಷಕರು ಆಂಗ್ಲ ಭಾಷೆಯ ವ್ಯಾಮೋಹದಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದರೆ ಈಗ ಸರ್ಕಾರವು ನೂತನವಾಗಿ ಆರಂಭಿಸಿರುವ ಕೆಪಿಎಸ್ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ದಾನಿಗಳ ಸಹಕಾರದಿಂದ ‘ಮಕ್ಕಳ ಮನೆ’ಗಳನ್ನು ಆರಂಭಿಸಿ ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಬೋಧಿಸಲಾಗುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ದಾಖಲಿಸಬೇಕು” ಎಂದು ವಿನಂತಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿಗಳ ಧರ್ಮಪತ್ನಿ ಚಂದನ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ತಾಲ್ಲೂಕು ವೈದ್ಯಾಧಿಕಾರಿ ಅಜಿತ್, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ರಾಜಸ್ವ ನಿರೀಕ್ಷಕರಾದ ಜ್ಞಾನೇಶ್, ರಾಜಮೂರ್ತಿ, ಜಗದೀಶ್ ಉಪಸ್ಥಿತರಿದ್ದರು.
ಅಲ್ಲದೆ, ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಗದೀಶ್, ಶಿವಕುಮಾರ್, ಆನಂದ್, ಹಿರಳಹಳ್ಳಿ ಶೇಖರ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕ ಲೋಕೇಶ್ ಮೂರ್ತಿ, ಸಹ ಶಿಕ್ಷಕಿಯರಾದ ದೇವಮ್ಮ, ಪವಿತ್ರ, ರಂಜಿತ, ಮಕ್ಕಳ ಮನೆಯ ಶಿಕ್ಷಕರು ಹಾಗೂ ಮುರುಕನಹಳ್ಳಿ, ಹಿರಳಹಳ್ಳಿ, ಊಚನಹಳ್ಳಿ ಗ್ರಾಮದ ಪ್ರಮುಖರು ಮತ್ತು ಪೋಷಕರು ಭಾಗವಹಿಸಿದ್ದರು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಕೆ.ಆರ್.ಪೇಟೆ: ಪರೋಪಕಾರ, ಸೇವಾ ಮನೋಭಾವನೆ ವಿದ್ಯಾರ್ಥಿಗಳ ಜೀವನದ ಉಸಿರಾಗಲಿ; ಶಿಕ್ಷಣ ತಜ್ಞೆ ಜೆ. ಉಮಾದೇವಿ
ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹಿಸಿ ಕೆ.ಆರ್. ಪೇಟೆಯಲ್ಲಿ ರೈತ ಸಂಘದಿಂದ ಪ್ರತಿಭಟನೆ
ರೇವತಿ ನಕ್ಷತ್ರದಂದು ಭೂವರಹನಾಥ ಕ್ಷೇತ್ರಕ್ಕೆ ಭಕ್ತ ಸಾಗರ