

ಹೊನ್ನಾವರ: ದೇಶ ಸೇವೆಗೆ ಆಯ್ಕೆಯಾಗಿರುವ ವಿನಯ ನಾಯ್ಕ ಅವರು ತಮ್ಮ ಸೇವಾ ಅವಧಿಯಲ್ಲಿ ದೇಶದ ರಕ್ಷಣೆಯೊಂದಿಗೆ ಅತ್ಯುತ್ತಮ ಕೆಲಸವನ್ನು ಮಾಡಿ, ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ನಗರೆ ಸುಬ್ರಹ್ಮಣ್ಯ ನಾಮಧಾರಿ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಮಾರಿಮನೆ ಹಾರೈಸಿದರು.
ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗಿರುವ ತಾಲ್ಲೂಕಿನ ನಗರೆಯ ಯುವಕ ವಿನಯ ಕಮಲಾಕರ ನಾಯ್ಕ ಇತನ ಸ್ವಗೃಹಕ್ಕೆ ಸುಬ್ರಹ್ಮಣ್ಯ ನಾಮಧಾರಿ ಸಂಘದ ಪದಾಧಿಕಾರಿಗಳು ಭೇಟಿ ನೀಡಿ, ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಊರಿನ ಹಿರಿಮೆ ಹೆಚ್ಚಿಸಿದ ಯುವಕ:
ಸಂಘದ ಕಾರ್ಯದರ್ಶಿ ಗಜಾನನ ನಾಯ್ಕ ಮಾತನಾಡಿ, “ನಮ್ಮ ಗ್ರಾಮದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸ್ಥಳೀಯ ಯುವಕನಿಗೆ ದೇಶ ಸೇವೆ ಮಾಡುವ ಇಂತಹ ಮಹತ್ತರ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ವಿನಯ ಕಮಲಾಕರ ನಾಯ್ಕ ಚಿಕ್ಕಂದಿನಿಂದಲೇ ಅತ್ಯಂತ ಕ್ರಿಯಾಶೀಲ ಹಾಗೂ ಚಟುವಟಿಕೆಯಿಂದ ಕೂಡಿದ್ದ ಯುವಕ. ಆತ ದೇಶ ಸೇವೆಗೆ ಆಯ್ಕೆಯಾಗುವ ಮೂಲಕ ಇಡೀ ಊರಿನ ಹಿರಿಮೆಯನ್ನು ಹೆಚ್ಚಿಸಿದ್ದಾನೆ. ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾದರೆ ಮಾತ್ರ ಇಂತಹ ಸೈನಿಕ ಸೇವೆಗೆ ಆಯ್ಕೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ವಿನಯ ಇಂದಿನ ಯುವ ಪೀಳಿಗೆಗೆ ಉತ್ತಮ ಪ್ರೇರಣೆಯಾಗಿದ್ದಾನೆ” ಎಂದು ಶ್ಲಾಘಿಸಿದರು.

ಪೋಷಕರಿಗೂ ಸನ್ಮಾನ:
ಇದೇ ಸಂದರ್ಭದಲ್ಲಿ ಸೇನೆಗೆ ದೇಶ ಕಾಯುವ ಜವಾಬ್ದಾರಿಯೊಂದಿಗೆ ಹೊರಟಿರುವ ಯುವಕ ವಿನಯ ನಾಯ್ಕ ಹಾಗೂ ಆತನನ್ನು ದೇಶ ಸೇವೆಗೆ ಪ್ರೋತ್ಸಾಹಿಸಿ ಸಜ್ಜುಗೊಳಿಸಿದ ಹೆತ್ತ ಪೋಷಕರಾದ ಶ್ರೀಮತಿ ವಿಜಯ ಮತ್ತು ಕಮಲಾಕರ ನಾಯ್ಕ ದಂಪತಿಗಳನ್ನು ಸಂಘದ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ ನೀಡಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಹೆಮ್ಮೆಯ ಸನ್ಮಾನದ ಸಂದರ್ಭದಲ್ಲಿ ನಗರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಐ. ವಿ. ನಾಯ್ಕ, ಪ್ರಮುಖ ಉದ್ಯಮಿ ಸಿ. ಬಿ. ನಾಯ್ಕ, ಸಂಘದ ಸದಸ್ಯರುಗಳಾದ ಜೆ. ಜಿ. ನಾಯ್ಕ, ಬಾಬು ನಾಯ್ಕ, ಸಂತೋಷ ನಾಯ್ಕ, ಮಂಜುನಾಥ ಎನ್. ನಾಯ್ಕ, ಮಂಜುನಾಥ ವಿ. ನಾಯ್ಕ, ವಾಸುದೇವ ನಾಯ್ಕ, ದೇವಪ್ಪ ನಾಯ್ಕ, ಲೋಹಿತ್ ನಾಯ್ಕ, ಎಂ. ಎಚ್. ನಾಯ್ಕ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಯುವ ಸೈನಿಕನಿಗೆ ಶುಭ ಕೋರಿದರು.

About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.