ಭಟ್ಕಳ: ಇಲ್ಲಿನ ತಾಲೂಕಿನ ಬೆಳಕೆ ಗ್ರಾಮದ ಕಾನುಬದ್ಲು ಬೊಮ್ಮನಕೆರೆ ನಿವಾಸಿಯಾದ ಯುವತಿಯೊಬ್ಬರು ಬೆಂಗಳೂರಿನ ಕೆ.ಆರ್. ಪುರಂ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ದೀಪಾಲಿ ಗುರು ಗೊಂಡ ಎಂದು ಗುರುತಿಸಲಾಗಿದೆ. ಕಳೆದ ಏಳು ತಿಂಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರು, ಸಹೋದ್ಯೋಗಿಗಳೊಂದಿಗೆ ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನಿಂತಿದ್ದ ವಾಹನಕ್ಕೆ ಲಾರಿ ಡಿಕ್ಕಿ
ಲಭ್ಯವಿರುವ ಮಾಹಿತಿಯ ಪ್ರಕಾರ, ಕೆ.ಆರ್. ಪುರಂ ಸಮೀಪ ಚಾಲಕನು ಮೂತ್ರ ವಿಸರ್ಜನೆಗಾಗಿ ಟಿಟಿ (Tempo Traveller) ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದನು. ಈ ಸಂದರ್ಭದಲ್ಲಿ ಹೆಚ್ಚಿನ ಸಿಬ್ಬಂದಿ ವಾಹನದಿಂದ ಕೆಳಗಿಳಿದಿದ್ದರು. ಆದರೆ ದೀಪಾಲಿ ಸೇರಿದಂತೆ ಮೂವರು ವಾಹನದ ಒಳಗಡೆಯೇ ಉಳಿದುಕೊಂಡಿದ್ದರು. ಇದೇ ವೇಳೆ ಅತಿವೇಗವಾಗಿ ಬಂದ ಲಾರಿಯೊಂದು ನಿಂತಿದ್ದ ಟಿಟಿ ವಾಹನದ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನ ರಸ್ತೆಯಲ್ಲೇ ಪಲ್ಟಿಯಾಗಿದೆ.
ಆಂತರಿಕ ರಕ್ತಸ್ರಾವ: ಕುಸಿದು ಬಿದ್ದು ಸಾವು
ಅಪಘಾತದಲ್ಲಿ ಮತ್ತೋರ್ವ ಯುವತಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿದ್ದವರು ಆಕೆಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದರು. ದೀಪಾಲಿಗೆ ಮೇಲ್ನೋಟಕ್ಕೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿರುವುದು ಕಂಡುಬಂದಿತ್ತು. ಅವರು ಪ್ರಜ್ಞಾವಸ್ಥೆಯಲ್ಲೇ ಇದ್ದು, ಅಲ್ಲಿದ್ದವರಿಗೆ ತಮ್ಮ ತಂದೆಯ ಮೊಬೈಲ್ ಸಂಖ್ಯೆ ಹಾಗೂ ಮನೆಯ ವಿಳಾಸವನ್ನೂ ನೀಡಿದ್ದರು. ಆದರೆ, ತಲೆಗೆ ಹಾಗೂ ದೇಹದ ಒಳಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿದ್ದರಿಂದ (ಆಂತರಿಕ ಗಾಯ) ಕೆಲವೇ ಕ್ಷಣಗಳಲ್ಲಿ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

2 ಗಂಟೆ ತಡವಾಗಿ ಬಂದ ಆಂಬುಲೆನ್ಸ್
ಅಪಘಾತದ ಬಳಿಕ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ಆಂಬುಲೆನ್ಸ್ ಘಟನಾ ಸ್ಥಳಕ್ಕೆ ತಲುಪಲು ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಗಿದ್ದು, ಇದು ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಪಡಿಸಿತು ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆ.ಆರ್. ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗ್ರಾಮದಲ್ಲಿ ಶೋಕದ ವಾತಾವರಣ
ಮನೆಯ ಹಿರಿಯ ಮಗಳಾಗಿದ್ದ ದೀಪಾಲಿ ಅವರ ಅಕಾಲಿಕ ನಿಧನದಿಂದಾಗಿ ಹೆತ್ತವರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹವನ್ನು ಸ್ವಗ್ರಾಮವಾದ ಬೆಳಕೆ ಕಾನುಬದ್ಲು ಬೊಮ್ಮನಕೆರೆಗೆ ತರಲಾಗಿದ್ದು, ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಯುವತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಬಂಧು-ಬಳಗ ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

More Stories
ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಅಡಿಪಾಯ; ಶಾಸಕ ಮಂಕಾಳ ವೈದ್ಯ
ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿಯ ಬಂಧನ, ₹4.50 ಲಕ್ಷ ಮೌಲ್ಯದ ಚಿನ್ನಾಭರಣ ವಶ