March 29, 2026

ಅಪ್ಸರಕೊಂಡ ಕಡಲತೀರದಲ್ಲಿ ಮೃತ ಕಡಲಾಮೆಯ ದೇಹ ಪತ್ತೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲತೀರದಲ್ಲಿ ಮೃತ ಕಡಲಾಮೆಯ ದೇಹ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ತಜ್ಞರು ಪರಿಶೀಲನೆ ನಡೆಸಿದರು. ಸಾವಿಗೆ ನಿಖರ ಕಾರಣ ತಿಳಿಯಲು ನಿಯಮಾನುಸಾರ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಮೃತದೇಹವನ್ನು ಮರಳಿನಲ್ಲಿ ಹೂಳಲಾಯಿತು.

ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲತೀರವು ಇಂದು ಕೇವಲ ಪ್ರವಾಸಿ ತಾಣವಾಗಿ ಉಳಿದಿಲ್ಲ; ಅದು ಪರಿಸರ ಮತ್ತು ವಾಣಿಜ್ಯದ ನಡುವಿನ ಸಂಘರ್ಷದ ಕಣವಾಗಿ ಬದಲಾಗಿದೆ. ಇತ್ತೀಚೆಗೆ ಈ ಕಡಲತೀರದಲ್ಲಿ ನಡೆದ ಕಡಲಾಮೆಯ ಸಾವು, ಆಡಳಿತಶಾಹಿ ಮತ್ತು ಪ್ರವಾಸೋದ್ಯಮದ ಅಂಧಾಭಿಮಾನಕ್ಕೆ ಬಿದ್ದಿರುವ ಮತ್ತೊಂದು ಕಪ್ಪು ಚುಕ್ಕೆ.

ಪ್ರೀ-ವೆಡ್ಡಿಂಗ್ ಶೂಟಿಂಗ್ ಮತ್ತು ಫೈರ್ ಕ್ಯಾಂಪ್‌ಗಳAತಹ ಐಷಾರಾಮಿ ಚಟುವಟಿಕೆಗಳಿಗೆ ಪ್ರವಾಸೋದ್ಯಮ ಇಲಾಖೆಯು ಒಂದು ವರ್ಷದ ಅವಧಿಗೆ ಅನುಮತಿ ನೀಡಿದೆ. ಈ ಅನುಮತಿ ಪತ್ರದಲ್ಲಿ ಪರಿಸರ ಸೂಕ್ಷ್ಮ ವಲಯಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂಬ ಸ್ಪಷ್ಟ ಷರತ್ತು ವಿಧಿಸಲಾಗಿದೆ. ಆದರೆ, ಅನುಮತಿ ನೀಡುವ ಮುನ್ನ ಈ ಪ್ರದೇಶವು ಅಪರೂಪದ ಕಡಲಾಮೆಗಳ ಸಂತಾನೋತ್ಪತ್ತಿ ತಾಣ ಎಂಬ ಸತ್ಯವನ್ನು ಆಡಳಿತ ಮರೆತಂತಿದೆ. ಇಂದು ಸಂಭವಿಸಿರುವ ಕಡಲಾಮೆಯ ಸಾವು ಈ ನಿರ್ಲಕ್ಷ್ಯದ ನೇರ ಫಲಿತಾಂಶವಾಗಿದೆ.

ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸಾರ್ವಜನಿಕರು ಈ ಮೊದಲೇ ಮನವಿ ಕೊಟ್ಟಿದ್ದರೂ ಸಹ, ಆ ಮನವಿಯನ್ನು ಬದಿಗಿಟ್ಟು ಇಲಾಖೆಯವರು ರಾತ್ರಿ 9:00 ಗಂಟೆಯ ತನಕ ಫೈರ್ ಕ್ಯಾಂಪ್ ಹಾಕಲು ಅನುಮತಿ ನೀಡಿದ್ದಾರೆ. ಇದು ಕಡಲಾಮೆಗೆ ರಕ್ಷಣೆ ಕೊಟ್ಟಂತಾಯಿತೇ ಅಥವಾ ವಾಣಿಜ್ಯ ಚಟುವಟಿಕೆ ನಡೆಸಲು ಕುಮ್ಮಕ್ಕು ಕೊಟ್ಟಂತಾಯಿತೇ? ಕಡಲಾಮೆಗೆ ತೊಂದರೆಯಾಗುತ್ತಿದೆ ಎಂಬ ಎಚ್ಚರಿಕೆಯ ನಡುವೆಯೂ ವಾಣಿಜ್ಯ ಚಟುವಟಿಕೆಗೆ ಪರ್ಮಿಶನ್ ಕೊಡಲು ಕಾರಣವೇನು ಎಂಬ ಪ್ರಶ್ನೆ ಈಗ ಮೂಡಿದೆ.

ಇಲಾಖೆಯ ಆದೇಶದಂತೆ ಚಟುವಟಿಕೆಗಳು ರಾತ್ರಿ 9:00 ಗಂಟೆಯವರೆಗೆ ಮಾತ್ರ ನಡೆಯಬೇಕು. ಆದರೆ, ರಾತ್ರಿ ವೇಳೆಯ ತೀವ್ರತರದ ಬೆಳಕು ಮತ್ತು ಬೆಂಕಿಯ ಅಬ್ಬರವು ಕಡಲಾಮೆಗಳ ನೈಸರ್ಗಿಕ ಹಾದಿಯನ್ನು ತಪ್ಪಿಸುತ್ತಿವೆ ಎಂಬುದು ನಗ್ನ ಸತ್ಯ. “ಯಾವುದೇ ಸಂದರ್ಭದಲ್ಲಿ ಆಗುವ ತೊಂದರೆ ಅಥವಾ ಅನಾಹುತಗಳಿಗೆ ಸಮಿತಿ ಹೊಣೆಗಾರರಾಗುವುದಿಲ್ಲ” ಎಂಬ ಷರತ್ತು ಅಧಿಕಾರಿಗಳಿಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಇರುವ ದಾರಿಯಂತಿದೆ. ಪರಿಸರ ನಾಶವಾದಾಗ ಹೊಣೆ ಹೊರದ ವ್ಯವಸ್ಥೆ ಯಾಕಿರಬೇಕು?

ಅನುಮತಿ ಪತ್ರದ 15ನೇ ನಿಯಮದ ಪ್ರಕಾರ, ಚಟುವಟಿಕೆಯಿಂದ ಸಾರ್ವಜನಿಕ ದೂರು, ಆಕ್ಷೇಪಣೆ ಬಂದಲ್ಲಿ ಜಿಲ್ಲಾಧಿಕಾರಿಗಳಿಗೆ ಅಥವಾ ಉಪ ನಿರ್ದೇಶಕರಿಗೆ ಈ ಅನುಮತಿಯನ್ನು ರದ್ದುಗೊಳಿಸುವ ಸಂಪೂರ್ಣ ಅಧಿಕಾರವಿದೆ. ಇಂದಿನ ಘಟನೆಯು ಕೇವಲ ದೂರು ಮಾತ್ರವಲ್ಲ, ಅದು ಪ್ರಕೃತಿಯೇ ನೀಡುತ್ತಿರುವ ಎಚ್ಚರಿಕೆ.
ಜಿಲ್ಲಾಡಳಿತವು ಕೇವಲ ವರಮಾನವನ್ನೇ ಗುರಿಯಾಗಿಸಿಕೊಳ್ಳದೆ, ಪರಿಸರ ಸಮತೋಲನವನ್ನು ಕಾಪಾಡಬೇಕಿದೆ. ಇಲ್ಲವಾದಲ್ಲಿ, ‘ಒಂದು ರಾಜ್ಯ ಹಲವು ಲೋಕ’ ಎಂಬ ಘೋಷವಾಕ್ಯದ ಪ್ರವಾಸೋದ್ಯಮವು ಅಳಿವಿನಂಚಿನಲ್ಲಿರುವ ಜೀವಿಗಳ ಪಾಲಿಗೆ ಮಸಣವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!