ಭಟ್ಕಳ: ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡಕ್ಕೆ ವಿಬು ಖಬ್ರು ಅವರು ಅಡಿಗಲ್ಲು ಇಡುವ ಮೂಲಕ ಚಾಲನೆ ನೀಡಿದರು.
ಉತ್ತರ ಕನ್ನಡ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಭಟ್ಕಳ ತಾಲೂಕಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು. ಪೂಜೆ ಸಲ್ಲಿಸಿ ಅಡಿಗಲ್ಲುಗಳಿಗೆ ವಿಧಿ ವಿಧಾನಗಳಂತೆ ಪೂಜೆ ನೆರವೇರಿಸಿ, ಭೂಮಿ ಛೇದನ ಮಾಡುವ ಮೂಲಕ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸುಮಾರು ₹12 ಕೋಟಿ ವೆಚ್ಚದಲ್ಲಿ ಆಧುನಿಕ ವಿನ್ಯಾಸದೊಂದಿಗೆ ನಿರ್ಮಾಣವಾಗಲಿರುವ ಭಟ್ಕಳ ನ್ಯಾಯಾಲಯ ಸಂಕೀರ್ಣವು ಎರಡು ಮಹಡಿಗಳ ಕಟ್ಟಡವಾಗಿದ್ದು, ನಾಲ್ಕು ನ್ಯಾಯಾಲಯ ಸಭಾಂಗಣಗಳು, ಗ್ರಂಥಾಲಯ, ಡಿಜಿಟಲ್ ಕೋಣೆ, ದಾಖಲೆ ಕೊಠಡಿ (ರೆಕಾರ್ಡ್ ರೂಂ), ಎಪಿಪಿ ಕೊಠಡಿ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಹೊಂದಿರಲಿದೆ. ಕಟ್ಟಡದಲ್ಲಿ ಸಾರ್ವಜನಿಕ ಹಾಗೂ ಸಿಬ್ಬಂದಿ ಅನುಕೂಲಕ್ಕಾಗಿ ಎರಡು ಲಿಫ್ಟ್‌ಗಳನ್ನು ಅಳವಡಿಸಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿನ ಶಂಕರ ಮಗದಮ್ ವಹಿಸಿದ್ದರು. ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಹಾಗೂ ಅನಂತ ರಾಮನಾಥ ಹೆಗಡೆ ಉಪಸ್ಥಿತರಿದ್ದರು.
ವಿಶೇಷ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಾಗವಹಿಸಿದರು. ಜೊತೆಗೆ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಕೆ.ಎಸ್. ಭರತ ಕುಮಾರ, ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ, ನಗರಸಭಾ ಆಯುಕ್ತ ಬಾಬಾಸಾಹೇಬ್ ಮಾನೆ, ಸಹಾಯಕ ಆಯುಕ್ತ ಪ್ರವೀಣ ಕರಾಂಡೆ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಭಟ್ಕಳ ಬಾರ್ ಅಸೋಸಿಯೇಶನ್ ಅಧ್ಯಕ್ಷ ಈಶ್ವರ ಎಂ. ನಾಯ್ಕ, ಕಾರ್ಯದರ್ಶಿ ನಾಗೇಶ ಗದ್ದೆಮನೆ, ಉಪಾಧ್ಯಕ್ಷ ಆರ್.ಜಿ. ನಾಯ್ಕ, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಎಲ್. ನಾಯ್ಕ, ಗೌರವಾಧ್ಯಕ್ಷ ಜೆ.ಡಿ. ನಾಯ್ಕ ಹಾಗೂ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಖ್ಯ ನ್ಯಾಯಮೂರ್ತಿಗೆ ಅದ್ದೂರಿ ಸ್ವಾಗತ
ಭಟ್ಕಳಕ್ಕೆ ಪ್ರಥಮ ಬಾರಿ ಆಗಮಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಅವರಿಗೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಚೆಂಡೆ ಹಾಗೂ ಗೊಂಡರ ಡೆಕ್ಕೆ ಕುಣಿತ ಕಾರ್ಯಕ್ರಮವು ಸ್ವಾಗತಕ್ಕೆ ಮೆರಗು ನೀಡಿತು.
ನ್ಯಾಯಮೂರ್ತಿಗಳ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಥಳ ಪರಿಶೀಲನೆ ನಡೆಸಿತು. ಎಸ್‌ಪಿ ದೀಪನ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ದಿವಾಕರ ಹಾಗೂ ವೆಂಕಟೇಶ ನೇತೃತ್ವದಲ್ಲಿ ನ್ಯಾಯಾಲಯದ ಸುತ್ತಮುತ್ತ ಬಿಗಿಯಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ನ್ಯಾಯವಾದಿ ನಾಗರಾಜ ಈ.ಎಚ್. ನಿರ್ವಹಿಸಿದರು.

More Stories
ಮಹಿಳಾ ಶಕ್ತಿ ಅರಳಿದ ಸಂಭ್ರಮ
ವಸಿಮ್ ಅಹ್ಮದ್ ಹಲ್ವೆಗರ್ ಅವರಿಗೆ ಪಿಎಚ್ಡಿ ಪದವಿ
ಜನ ಮೆಚ್ಚುಗೆ ಪಡೆದ “ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ”