ಭಟ್ಕಳ: ನಗರದ ನವಾಯತ್ ಕಾಲೋನಿಯಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡು ವೃದ್ಧನ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ.
ಇಶಾ ನಮಾಜ್ ಬಳಿಕ ಮನೆಗೆ ಹಿಂತಿರುಗುತ್ತಿದ್ದ 60 ವರ್ಷದ ಹಸನ್ ಮೇಲೆ ಮನೆಯ ಹತ್ತಿರ ಅಡಗಿದ್ದ ಚಿರತೆ ಅಚಾನಕ್ ದಾಳಿ ಮಾಡಿದೆ. ದಾಳಿಯಿಂದ ಬೆಚ್ಚಿಬಿದ್ದ ಹಸನ್ ನೆಲಕ್ಕುರುಳಿದಾಗ, ಮನೆಯ ಹೊರಗಿದ್ದ ಪುತ್ರ ಶಫಿ ತಕ್ಷಣ ಧಾವಿಸಿ ಚಿರತೆಯನ್ನು ಹಿಮ್ಮೆಟ್ಟಿಸಿದ ಪರಿಣಾಮ ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ಭಯಭೀತ ವಾತಾವರಣ ನಿರ್ಮಾಣವಾಯಿತು. ಬಳಿಕ ಮಸೀದಿಯಿಂದ ಸುಮಾರು 200 ಮೀಟರ್ ದೂರದ ನಿವಾಸಿ ಬಶೀರ್ ಅಹ್ಮದ್ ತಮ್ಮ ಮನೆಯ ಬಳಿ ಅದೇ ಚಿರತೆಯನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ಸುದ್ದಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಚಿರತೆಯನ್ನು ಕಾಡಿನತ್ತ ಓಡಿಸಲು ಪ್ರಯತ್ನಿಸಲಾಯಿತು. ಮರ್ಯಮ್ ಅಲಿ ಮಸೀದಿ ಹಿಂಭಾಗ, ಮಾವಿನ ತೋಟ ಹಾಗೂ ಪಕ್ಕದ ಅರಣ್ಯ ಪ್ರದೇಶಗಳಲ್ಲಿ ತಡರಾತ್ರಿ ತನಕ ಶೋಧ ನಡೆಸಿದರೂ ಚಿರತೆ ಪತ್ತೆಯಾಗಲಿಲ್ಲ.
ಸಾಗರ ರಸ್ತೆ ಅರಣ್ಯದಿಂದ ಕಡ್ಡಿನಕಟ್ಟೆ ಮಾರ್ಗದ ಮೂಲಕ ವಸತಿ ಪ್ರದೇಶಕ್ಕೆ ದಾರಿ ತಪ್ಪಿ ಬಂದಿರಬಹುದೆಂದು ಶಂಕಿಸಲಾಗಿದೆ. ಇನ್ನೊಂದೆಡೆ, ಸ್ಥಳೀಯ ಯುವಕ ಅಬ್ದುಲ್ ರೆಹಮಾನ್ ಎರಡು ದಿನಗಳ ಹಿಂದೆ ಹೆಗ್ಗಲ್ ನದಿ ದಡದಲ್ಲಿ ಇದೇ ಪ್ರಾಣಿಯನ್ನು ಕಂಡಿರುವುದಾಗಿ ಹೇಳಿದ್ದು, ಟಾರ್ಚ್ ಬೆಳಕು ಬೀಳುತ್ತಿದ್ದಂತೆ ಚಿರತೆ ಘರ್ಜಿಸಿ ಓಡಿಹೋದ ಘಟನೆ ವಿವರಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಚಿರತೆ ಸಂಚರಿಸುತ್ತಿರಬಹುದೆಂದು ಅಂದಾಜಿಸಲಾಗಿದೆ. ಮರ್ಯಮ್ ಅಲಿ ಮಸೀದಿ–ಮುಝಮ್ಮಿಲ್ ಮಸೀದಿ ಹಾಗೂ ಕಾರಗದ್ದೆ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದ ಬೀದಿ ನಾಯಿಗಳು ಇತ್ತೀಚೆಗೆ ಕಾಣೆಯಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

More Stories
ಮಹಿಳಾ ಶಕ್ತಿ ಅರಳಿದ ಸಂಭ್ರಮ
ವಸಿಮ್ ಅಹ್ಮದ್ ಹಲ್ವೆಗರ್ ಅವರಿಗೆ ಪಿಎಚ್ಡಿ ಪದವಿ
ಜನ ಮೆಚ್ಚುಗೆ ಪಡೆದ “ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ”