ಭಟ್ಕಳ: ತಾಲೂಕಿನ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಶ್ರೀ ಭವಾನಿಶಂಕರ ದೇವರ 165ನೇ ವರ್ಷದ ರಥೋತ್ಸವವು ಹನುಮಜ್ಜಯಂತಿ ಪ್ರಯುಕ್ತ ಶ್ರೀ ಮಠದ ಪೀಠಾಧಿಪತಿಗಳಾದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಮಠದ ಸಂಪ್ರದಾಯದಂತೆ ಮಧ್ಯಾಹ್ನ 12 ಗಂಟೆಗೆ ರಥಾರೋಹಣ ನಡೆಯಿತು. ಬಳಿಕ ಶ್ರೀ ಭವಾನಿಶಂಕರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ನೂರಾರು ಭಕ್ತರು ರಥ ಕಾಣಿಕೆ, ಹಣ್ಣು-ಕಾಯಿ, ಹೂವುಗಳನ್ನು ಅರ್ಪಿಸಿ ಭಕ್ತಿ ಸಮರ್ಪಣೆ ಸಲ್ಲಿಸಿದರು.
ಸಂಜೆ 5:30ಕ್ಕೆ ಸ್ವಾಮೀಜಿಯವರು ರಥವನ್ನು ಏರಿದ ಕ್ಷಣದಿಂದಲೇ ಭಕ್ತರ ಹರ್ಷೋದ್ಘಾರಗಳ ನಡುವೆ ರಥಬೀದಿಯಲ್ಲಿ ರಥವನ್ನು ಎಳೆಯಲಾಯಿತು. ಬಳಿಕ ಅದೇ ಮಾರ್ಗದಲ್ಲಿ ರಥವು ಸಂಚರಿಸಿ ನಿರ್ದಿಷ್ಟ ಸ್ಥಳದಲ್ಲಿ ನೆಲೆಗೊಂಡಿತು. ಈ ವೇಳೆ ಸ್ವಾಮೀಜಿಯವರು ರಥದ ಮೇಲಿಂದಲೇ ಭಕ್ತರಿಗೆ ಪ್ರಸಾದ ವಿತರಣೆ ಮಾಡಿ ಭಕ್ತಿಭಾವ ಹೆಚ್ಚಿಸಿದರು.
ನಂತರ ಸಂಜೆ 6:30ಕ್ಕೆ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಭಕ್ತರ ಸಮ್ಮುಖದಲ್ಲಿ ಧರ್ಮಸಭೆ ನಡೆಯಿತು. ತಟ್ಟಿರಾಯ ಮತ್ತು ಚಂಡೆ ವಾದ್ಯಗಳು ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು.
ಡಿವೈಎಸ್ಪಿ ಗಿರೀಶ ಬಿ. ಹಾಗೂ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್ ನೇತೃತ್ವದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ರಥೋತ್ಸವ ಶಾಂತಿಯುತವಾಗಿ ನೆರವೇರಿತು.
ರಥೋತ್ಸವದಲ್ಲಿ ಶ್ರೀ ಮಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

More Stories
ಅತ್ಯುತ್ತಮ ಸೇವೆ: ನವೀನ್ ನಾಯ್ಕರಿಗೆ ಮುಖ್ಯಮಂತ್ರಿ ಪದಕ ಪ್ರದಾನ
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಮೂವರು ಬಂಧನ
ಅಳೇಕೋಡಿ ಬಂದರಿನಲ್ಲಿ ದುರಂತ: ಮೀನುಗಾರಿಕೆಗೆ ತೆರಳಿದ ಯುವಕ ಸಮುದ್ರದಲ್ಲಿ ನಾಪತ್ತೆ