ಹೊನ್ನಾವರ ಗುಣವಂತೆ: ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ, ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಧಾರ್ಮಿಕ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ವಿದ್ವಾಂಸ ಶ್ರೀ ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ದೇಶವನ್ನು ಗುರುತಿಸುವ ಮೈಲುಗಲ್ಲುಗಳು ದೇವಾಲಯಗಳು, ಗುರುಕುಲಗಳು ಹಾಗೂ ಆಯತಸ್ಥಳಗಳಾಗಿವೆ ಎಂದು ಹೇಳಿದರು. ವಿಷ್ಣು ಧರ್ಮೋತ್ತರ ಪುರಾಣ ಉಲ್ಲೇಖಿಸಿ ದೇವಾಲಯಗಳ ಉಗಮದ ವಾಸ್ತವವನ್ನು ವಿವರಿಸಿದರು. ಪ್ರಾಚೀನ ಪರಂಪರೆಯ ವಿಶ್ಲೇಷಣೆ ಮೂಲಕ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಪಂಚಾಯತನ ಪೂಜೆಯ ಮಹತ್ವವನ್ನು ವಿವರಿಸಿದರು. ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯ ವಿಸ್ತಾರಕ್ಕೆ ಕಾರಣವಾದ ದೇವಾಲಯಗಳನ್ನು ಸಂರಕ್ಷಿಸುವುದು ಮತ್ತು ಪಾವಿತ್ರ್ಯತೆಯನ್ನು ಕಾಪಾಡುವುದು ಅತ್ಯಂತ ಮುಖ್ಯ ಎಂದು ಅವರು ಕಿವಿಮಾತು ಹೇಳಿದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿದುಷಿ ಗೌರಿ ಹೆಗಡೆ ಮಾತನಾಡಿ, ಈ ಮಹತ್ತರ ಸಂದರ್ಭದಲ್ಲಿ ಭಾಗವಹಿಸುತ್ತಿರುವುದು ಸಂತೋಷ ತಂದಿದೆ ಎಂದರು. ಗುಣವಂತೆಯ ವಿದ್ಯಾ ಮಾಧವ ಪಂಡಿತರ ಕುರಿತು ನಡೆಸಿದ ಅಧ್ಯಯನದಿಂದ ಪಡೆದ ಡಾಕ್ಟರೇಟ್ ಪದವಿಯ ನೆನಪು ಈ ಸಂದರ್ಭದಲ್ಲಿ ಮೂಡುತ್ತಿದೆ ಎಂದು ಹೇಳಿದರು.
ದೇವಾಲಯಗಳಿಂದ ಮನೋವಿಕಾರಗಳು ದೂರವಾಗಿ, ಸದ್ಭಾವನೆ ಹಾಗೂ ಸದ್ಭಕ್ತಿ ಭಕ್ತರಲ್ಲಿ ಬೆಳೆಯಬೇಕೆಂದು ಅಭಿಪ್ರಾಯಪಟ್ಟರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಎಮ್.ವಿ. ಹೆಗಡೆ ಮಾತನಾಡಿ, ನಮ್ಮ ಸಮೃದ್ಧ ಭರತಖಂಡದ ಸಂಸ್ಕೃತಿಯ ಅಸ್ಮಿತೆಗಳು ದೇವಾಲಯಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮವು ಊರಿನ ಪುಟ್ಟ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಮ್.ಎಸ್. ಹೆಗಡೆ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಸುಧೀಶ ನಾಯ್ಕ ಮತ್ತು ಶ್ರೀ ಐ.ವಿ. ಹೆಗಡೆ ಕಾರ್ಯಕ್ರಮ ನಿರೂಪಣೆ ನಡೆಸಿದರು. ಶ್ರೀ ಎಂ.ಎಸ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಇಡಗುಂಜಿ ಮತ್ತು ಮಾಳ್ಕೋಡಿನ ಮಹಿಳೆಯರ ಜೈ ಹನುಮಾನ್ ಭಜನೆ ನೃತ್ಯ ತಂಡದಿಂದ ಭಜನೆ-ನೃತ್ಯ ನಡೆಯಿತು. ಯಕ್ಷಮಾಣಿಕ್ಯ ಚಿಂತನ ಹೆಗಡೆಯವರಿಂದ ಗಾನ ವೈಭವ, ಕುಮಾರಿ ಸಂಗೀತ ನಾಯ್ಕರಿಂದ ಭಕ್ತಿ ಸಂಗೀತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಅದೇ ರೀತಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯ ಗುರುಪಾದರಾದ ಸ್ವಾಮಿ ಶ್ರೀ ಸೂರ್ಯಪಾದರು ಹಾಗೂ ಅವರ ಶಿಷ್ಯ ಬಳಗದಿಂದ ಗಾನ, ಧ್ಯಾನ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಿದವು.

More Stories
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ
ಅಂಬೇಡ್ಕರ್ ಜಯಂತಿ ಹಾಗೂ ಮಾರ್ಗರೇಟ್ ಆಳ್ವ ಜನ್ಮದಿನ: ಸಮಾನತೆ-ಸಂವಿಧಾನದ ಮಹತ್ವ ಒತ್ತಿಹೇಳಿದ ನಾಯಕರು