April 17, 2026

ಶ್ರೀ ಶಂಕರ ಜಯಂತಿ ಆಚರಣೆ – ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ವೈಭವದ ಕಾರ್ಯಕ್ರಮ


ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ನಗರದ ಯೋಗಮಂದಿರದಲ್ಲಿ ಏಪ್ರಿಲ್ 20ರಂದು ಹಾಗೂ ಸ್ವರ್ಣವಲ್ಲಿಯಲ್ಲಿ ಏಪ್ರಿಲ್ 21ರಂದು ಶ್ರೀ ಶಂಕರ ಜಯಂತಿ ಆಚರಣೆಯನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿದೆ. ಎರಡೂ ದಿನಗಳಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ ಧರ್ಮಸಭೆ, ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯಲಿವೆ.


ಏಪ್ರಿಲ್ 20ರಂದು ಬೆಳಿಗ್ಗೆ 9.30ರಿಂದ ಶ್ರೀ ಶಂಕರ ಸ್ತೋತ್ರ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಭಕ್ತರು ವೇದಘೋಷಗಳ ನಡುವೆ ಪಾರಾಯಣದಲ್ಲಿ ಭಾಗವಹಿಸಿ ಜಗದ್ಗುರು ಆದಿ ಶಂಕರಾಚಾರ್ಯರ ಸ್ಮರಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಮದ್ ಆನಂದಬೋಧೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಶಿರಳಗಿಯ ಶ್ರೀ ಚೈತನ್ಯ ರಾಜಾರಾಮಾಶ್ರಮದ ಶ್ರೀ ಬ್ರಹ್ಮಾನಂದಭಾರತೀ ಮಹಾಸ್ವಾಮಿಗಳು ಉಪಸ್ಥಿತರಿದ್ದು ಧಾರ್ಮಿಕ ಸಂದೇಶ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ‘ಸಾಧನಾಶಂಕರ’ ಪ್ರಶಸ್ತಿಯನ್ನು ಉಂಚಳ್ಳಿಯ ಡಾ. ಶಂಕರ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಕೇಶವ ಹೆಗಡೆ ಗಡಿಕೈ ದಂಪತಿಗಳಿಗೆ ಸಮ್ಮಾನವೂ ನಡೆಯಲಿದೆ.


ಏಪ್ರಿಲ್ 21ರಂದು ಬೆಳಿಗ್ಗೆ 9.30ರಿಂದ ಸ್ವರ್ಣವಲ್ಲೀ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಶ್ರೀ ಗಣಪತಿ ಪೂಜೆ, ಸಂಕಲ್ಪ, ಋತ್ವಿಕ್ ವರಣ, ವೇದ ಪಾರಾಯಣ ಸೇರಿದಂತೆ ಶ್ರೀ ಶಂಕರ ದಿಗ್ವಿಜಯ, ಜ್ಞಾನದೀಪಿಕಾ, ಭಾಷ್ಯತ್ರಯ ಪಾರಾಯಣ, ಗಾಯತ್ರೀ ಜಪ, ಪುರುಷಸೂಕ್ತ ಜಪ ಹಾಗೂ ಕಲ್ಪೋಕ್ತ ಮಹಾಪೂಜೆ ನೆರವೇರಲಿದೆ. ಮಾತೆಯರಿಂದ ಶ್ರೀ ಶಂಕರರ ಸಮಗ್ರ ಸ್ತೋತ್ರ ಪಾರಾಯಣವೂ ವಿಶೇಷವಾಗಿ ನಡೆಯಲಿದೆ.


ಸಂಜೆ 4.30ಕ್ಕೆ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀಮಠದ ಪೀಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಶಿವಮೊಗ್ಗದ ರಾಮಕೃಷ್ಣಾಶ್ರಮದ ಪರಮಪೂಜ್ಯ ಶ್ರೀ ವಿನಯಾನಂದ ಸರಸ್ವತೀ ಸ್ವಾಮಿಗಳು ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.


ಇದೇ ಸಂದರ್ಭದಲ್ಲಿ ‘ಸಾಧನಾ ಶಂಕರ’ ಪ್ರಶಸ್ತಿಯನ್ನು ನವದೆಹಲಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿಶ್ರಾಂತ ಉಪಕುಲಪತಿ ಡಾ. ಪರಮೇಶ್ವರ ಶಾಸ್ತ್ರಿಗಳಿಗೆ ಪ್ರದಾನ ಮಾಡಲಾಗುತ್ತದೆ. ವೆಂಕಟರಮಣ ನರಸಿಂಹ ಗೇರಗದ್ದೆ ದಂಪತಿಗಳಿಗೆ ಸಮ್ಮಾನ ನಡೆಯಲಿದೆ ಎಂದು ಶ್ರೀಮಠ ಪ್ರಕಟಣೆ ತಿಳಿಸಿದೆ.

ನಾಲ್ಕು ಸಾಧಕರಿಗೆ ಗೌರವ
ಸಂಸ್ಕೃತ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಉಂಚಳ್ಳಿಯ ವಿ. ಶಂಕರ ಭಟ್ಟ ಹಾಗೂ ವಿಶ್ರಾಂತ ಕುಲಪತಿ ಡಾ. ಪರಮೇಶ್ವರ ಶಾಸ್ತ್ರಿಗಳಿಗೆ ‘ಸಾಧನಾ ಶಂಕರ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಧಾರ್ಮಿಕ ಶ್ರದ್ಧೆಯ ಕುಟುಂಬಗಳಾದ ಗಡಿಕೈನ ಕೇಶವ ಹೆಗಡೆ ಹಾಗೂ ನರಸಿಂಹ ಗೇರಗದ್ದೆ ಕುಟುಂಬಗಳಿಗೆ ಸಮ್ಮಾನಿಸಲಾಗುತ್ತದೆ.

About The Author

error: Content is protected !!