ಏಕರೂಪ ಸಂಸ್ಕಾರ ಶಿಕ್ಷಣಕ್ಕೆ ಒತ್ತು, ತಾಲೂಕು ಮಟ್ಟದಲ್ಲಿ ಸಮಿತಿಗಳ ರಚನೆಗೆ ತೀರ್ಮಾನ
ಶಿರಸಿ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಕ್ಕಳಿಗೆ ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣ ಹಾಗೂ ಎಲ್ಲ ನಾಗರಿಕರಿಗೆ ಏಕರೂಪ ಆಚಾರಸಂಹಿತೆ ರೂಪಿಸುವ ಉದ್ದೇಶದಿಂದ ಸಮಿತಿಗಳನ್ನು ರಚಿಸಲು ಭಾರತೀಯ ಸಂತ ಮಹಾಪರಿಷತ್ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಸಂತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನಗರದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕುಮಟಾದಲ್ಲಿ ಮತ್ತೊಂದು ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸುವುದಕ್ಕೂ ಒಮ್ಮತ ವ್ಯಕ್ತವಾಯಿತು.

ಸಭೆಯು ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಶ್ರೀಗಳು, ಶ್ರೀ ಜಯೇಂದ್ರ ಪುರಿ ಶ್ರೀಗಳು ಹಾಗೂ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಅವರ ಸಾನ್ನಿಧ್ಯದಲ್ಲಿ ನಡೆಯಿತು. ಹದಿನೈದಕ್ಕೂ ಅಧಿಕ ಸಂತರು ಭಾಗವಹಿಸಿ ಭಾರತೀಯ ಸಂಸ್ಕೃತಿಯ ಆಧಾರಿತ ಶಿಕ್ಷಣದ ಅಗತ್ಯತೆಯನ್ನು ಒತ್ತಿಹೇಳಿದರು.

ಸಂತರು ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಅಗತ್ಯವಾದ ಅನೇಕ ಜೀವನ ಮೌಲ್ಯಗಳನ್ನು ಕಲಿಸುವಲ್ಲಿ ಕೊರತೆ ಕಂಡುಬರುತ್ತಿದ್ದು, ಈ ಕೊರತೆಯನ್ನು ನೀಗಿಸಲು ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಭಾರತೀಯ ಸಂಸ್ಕೃತಿ, ಮೌಲ್ಯಗಳು ಹಾಗೂ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.

ಈ ಶಿಕ್ಷಣ ಪದ್ಧತಿಯಲ್ಲಿ ದೇಶಭಕ್ತಿ, ಧಾರ್ಮಿಕ ಸಹಿಷ್ಣುತೆ, ಹಿರಿಯರಿಗೆ ಗೌರವ, ಕುಟುಂಬ ಮೌಲ್ಯಗಳು, ನೈತಿಕತೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿ ಸೇರಿದಂತೆ ಭಾರತೀಯ ಸಂಸ್ಕೃತಿಯ ಮೂಲಭೂತ ಅಂಶಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ. ಸಂಸ್ಕಾರಯುತ ಮತ್ತು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಎಂಟು ವರ್ಷಗಳ ಅವಧಿಯ ಈ ಕಾರ್ಯಕ್ರಮದಲ್ಲಿ ಸಂತರ ಮಾರ್ಗದರ್ಶನದಲ್ಲಿ ವಿಶೇಷ ತರಬೇತಿ ಪಡೆದ ಬೋಧಕರು ಪಾಠ ಬೋಧಿಸಲಿದ್ದಾರೆ. ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಸಂಸ್ಕಾರ ಕೇಂದ್ರಗಳನ್ನು ಸ್ಥಾಪಿಸಿ ಕ್ರಮಬದ್ಧ ಶಿಕ್ಷಣ ನೀಡಲಾಗುವುದು. ಜಾತಿ, ಮತ, ಭಾಷೆ ಅಥವಾ ಸಾಮಾಜಿಕ ಭೇದವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.
2ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಸಂಜೆ 4ರಿಂದ 5 ಗಂಟೆಯವರೆಗೆ ಹಾಗೂ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರ ಸಂಜೆ 4ರಿಂದ 5 ಗಂಟೆಯವರೆಗೆ ತರಗತಿಗಳನ್ನು ನಡೆಸಲು ಯೋಜಿಸಲಾಗಿದೆ. ಮಕ್ಕಳಲ್ಲಿ ಶಿಸ್ತು, ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.
ಸಭೆಯಲ್ಲಿ ಸಮಾಜದ ವಿವಿಧ ವರ್ಗಗಳ ಜನರನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು, ತಾಲೂಕು ಮಟ್ಟದ ದೇವಸ್ಥಾನಗಳಲ್ಲಿ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸಂಸ್ಕಾರ ಶಿಕ್ಷಣದ ಬಗ್ಗೆ ಒಮ್ಮತ ನಿರ್ಮಿಸುವುದಕ್ಕೆ ತೀರ್ಮಾನ ಕೈಗೊಳ್ಳಲಾಯಿತು.
ಪ್ರಮುಖ ಅಂಶಗಳು
- ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣ.
- ಪ್ರತಿ ಶನಿವಾರ ಮತ್ತು ಭಾನುವಾರ ಒಂದು ಗಂಟೆಯ ತರಬೇತಿ.
- ಭಾರತೀಯ ನೆಲೆಯ ಶಿಕ್ಷಣ ಮತ್ತು ಸಂಸ್ಕಾರಗಳಿಗೆ ಆದ್ಯತೆ.
- ವ್ಯಕ್ತಿಯ ಉನ್ನತಿ, ಕುಟುಂಬ ಕ್ಷೇಮ, ಸಮಾಜದ ಹಿತ ಹಾಗೂ ದೇಶದ ಅಭಿವೃದ್ಧಿಗೆ ಒತ್ತು.
- ಭಾರತೀಯ ಸಂಸ್ಕೃತಿಗೆ ಸೇರಿದ ಎಲ್ಲರಿಗೂ ಏಕರೂಪ ಆಚಾರಸಂಹಿತೆ ರೂಪಿಸುವ ಪ್ರಯತ್ನ.
- ಸಂಧ್ಯಾಪ್ರಾರ್ಥನೆ, ಸ್ವಾಧ್ಯಾಯ, ಸದಾಚಾರ, ಸಮೈಕ್ಯತೆ ಹಾಗೂ ಸಹಯೋಗದ ಮೌಲ್ಯಗಳ ಬೋಧನೆ.
ಸಭೆಯಲ್ಲಿ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮೀಜಿ, ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ಮಾತಾ ನಿರ್ಮಲಾನಂದಾದೇವಿ, ಶ್ರೀ ಭವೇಶಾನಂದ ಶ್ರೀಗಳು, ವಿರೂಪಾಕ್ಷೇಶ್ವರ ಮಹಾರಾಜರು, ಬೌದ್ಧ ಲಾಮಾಗಳಾದ ಗುನಡುನ್ ಗ್ಯಾಸ್ಟೋ ಹಾಗೂ ಜಂಪಾ ಲೋಬಸಂಗ್ ಸೇರಿದಂತೆ ಹಲವು ಸಂತರು ಮತ್ತು ಗಣ್ಯರು ಉಪಸ್ಥಿತರಿದ್ದರು. ಮಾರಿಗುಡಿ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿದರು. ಆಕಾಶ್ ವಿಶ್ವಾಮಿತ್ರ ಕಾರ್ಯಕ್ರಮ ನಿರ್ವಹಿಸಿ, ಶ್ರೀಕಾಂತ ಅಗಸಾಲ ವಂದಿಸಿದರು.

More Stories
ಪೂರ್ಣಿಮಾ ಹೆಗಡೆಗೆ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ
ಪೌಷ್ಟಿಕ ಆಹಾರದ ಸೇವನೆಯಿಂದ ಕ್ಷಯರೋಗ ಬೇಗ ಗುಣಮುಖ. – ತಾಲೂಕಾ ಆರೋಗ್ಯಾಧಿಕಾರಿ ಡಾ. ಮಧುಕರ ಪಾಟೀಲ.
ಅರಣ್ಯ ಇಲಾಖೆ ಕಾರ್ಯ ವೈಖರ್ಯಕ್ಕೆ ತೀವ್ರ ಅಸಮಧಾನ : ನಡುತೋಪು ಲೆಕ್ಕಕ್ಕೆ ಕೋಟಿಗಳಷ್ಟು ಹಣ ಖರ್ಚು: ಕೋಟಿ ಹೊಂಡ ಎಲ್ಲಿ, ನೆಟ್ಟಿದ್ದು ಎಷ್ಟು, ಬದುಕಿದ್ದು ಎಷ್ಟು- ಅರಣ್ಯವಾಸಿಗಳ ಪ್ರಶ್ನೆ