ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣ ಮಹೋತ್ಸವ; ಗಣ್ಯರ ಭೇಟಿ
ಕೃಷ್ಣರಾಜಪೇಟೆ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಭೂ ವೈಕುಂಠ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಭೂವರಹನಾಥ ದೇವಾಲಯಯಲ್ಲಿ ರೇವತಿ ನಕ್ಷತ್ರದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವ ಭಕ್ತಿಭಾವದಿಂದ ನೆರವೇರಿತು. ರಾಜ್ಯದ ಮಾಜಿ ಸಚಿವ ಬೈರತಿ ಬಸವರಾಜು, ರಾಘವೇಂದ್ರ ರಾಜಕುಮಾರ್ ಅವರ ಪತ್ನಿ ಮಂಗಳಾ ಹಾಗೂ ಮಾಜಿ ಮನ್ಮುಲ್ ಅಧ್ಯಕ್ಷ ಎಂ.ಬಿ. ಹರೀಶ್ ಸೇರಿದಂತೆ ಹಲವು ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದರು.


ವಿಶ್ವದಲ್ಲಿಯೇ ಅಪರೂಪವೆನ್ನಲಾದ 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ನಿರ್ಮಿತ ಭೂವರಹನಾಥ ಸ್ವಾಮಿಗೆ ಹಾಲು, ಎಳನೀರು, ಕಬ್ಬಿನ ರಸ, ಗಂಗಾಜಲ, ಜೇನುತುಪ್ಪ ಹಾಗೂ ಹಸುವಿನ ತುಪ್ಪ ಸೇರಿದಂತೆ ವಿವಿಧ ದ್ರವ್ಯಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ಬಳಿಕ 58 ಬಗೆಯ ಅಪರೂಪದ ಹೂವುಗಳಿಂದ ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ನಡೆಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಾಲಯ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಡಾ. ಶ್ರೀನಿವಾಸ ರಾಘವನ್ ಮಾತನಾಡಿ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕ್ಷೇತ್ರವಾಗಿ ಭೂವರಹನಾಥ ದೇವಾಲಯದ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರ ದಂಡೇ ಹರಿದು ಬರುತ್ತಿದೆ ಎಂದು ತಿಳಿಸಿದರು.


ತಿರುಮಲ-ತಿರುಪತಿ ಮಾದರಿಯಲ್ಲಿ ಮೂರು ಪ್ರಕಾರಗಳ ಭವ್ಯ ದೇವಾಲಯವನ್ನು ಗ್ರಾನೈಟ್ ಕಲ್ಲಿನಿಂದ ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ನಾಲ್ಕು ದಿಕ್ಕುಗಳಲ್ಲಿ 56 ಅಡಿ ಎತ್ತರದ ರಾಜಗೋಪುರಗಳು ಹಾಗೂ 186 ಅಡಿ ಎತ್ತರದ ಬೃಹತ್ ರಾಜಗೋಪುರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇನ್ನೂ ಮೂರು ವರ್ಷಗಳಲ್ಲಿ ದೇವಾಲಯವನ್ನು ಲೋಕಾರ್ಪಣೆ ಮಾಡುವ ಸಂಕಲ್ಪವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದರ್ಶನ ಪಡೆದರು. ಭಕ್ತರಿಗೆ ಸಿಹಿ ಪೊಂಗಲ್, ಬಿಸಿಬೇಳೆ ಬಾತ್, ಮೊಸರನ್ನ ಹಾಗೂ ಉಪ್ಪಿಟ್ಟು ಪ್ರಸಾದ ವಿತರಿಸಲಾಯಿತು.
ವರದಿ : ಡಾ.ಕೆ ಆರ್ ನೀಲಕಂಠ. ಕೃಷ್ಣರಾಜಪೇಟೆ

More Stories
ಕೆ.ಆರ್.ಪೇಟೆಯಲ್ಲಿ ಶಿವ-ಪಾರ್ವತಿಯರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಂಭ್ರಮ
ಆಷಾಢದ 2ನೇ ಶುಕ್ರವಾರ: ವಾರಾಹಿ ರೂಪದಲ್ಲಿ ಕಂಗೊಳಿಸಿದ ಶ್ರೀ ಚೌಡೇಶ್ವರಿ ದೇವಿ, ಹರಿದುಬಂದ ಭಕ್ತಸಾಗರ
ಡ್ರಗ್ಸ್ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಕೈಜೋಡಿಸಿ: ಕೆ.ಆರ್.ಪೇಟೆಯಲ್ಲಿ ಡಿವೈಎಸ್ಪಿ ಚೆಲುವರಾಜು ಕರೆ