April 22, 2026

ಮಸೂರಿನಲ್ಲಿ ಸಂಪನ್ನಗೊಂಡ ಸ್ಪೋಕನ್ ಇಂಗ್ಲೀಷ್ ಶಿಬಿರ ಕನ್ನಡದೊಂದಿಗೆ ಇಂಗ್ಲಿಷ್ ಮಾತಾಡಲು ಕನ್ನಡದ ಸಮೀರ್ ಕರೆ


ಕುಮಟಾ : ತಾಲ್ಲೂಕಿನ ಮಾಸೂರಿನ ಶ್ರೀ ಬಬ್ರುಲಿಂಗೇಶ್ವರ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘ ಹಾಗೂ ಕರ್ನಾಟಕ ರಣಧೀರ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದಶದಿನಾತ್ಮಕ ಸ್ಪೋಕನ್ ಇಂಗ್ಲೀಷ್ ಶಿಬಿರವು ವಿದ್ಯುಕ್ತವಾಗಿ ಸಂಪನ್ನಗೊಂಡಿತು.


ಸ್ಪೋಕನ್ ಇಂಗ್ಲೀಷ್ ಸುಗಮಕಾರರಾದ ನಾಗರತ್ನಾ ಪಟಗಾರರವರಿಗೆ ” ವಿದ್ಯಾ ದೀಪ್ತಿ ” ಅಭಿದಾನದೊಂದಿಗೆ, ಪೇಟ, ಹಾರ, ಶಾಲು, ಮಾನಪತ್ರ ಹಾಗೂ ಗೌರವ ನಿಧಿಯೊಂದಿಗೆ ಆಪ್ತವಾಗಿ ಮಾನಿಸಲಾಯಿತು.
ಜೊತೆಗೆ ಈ ಸ್ಪೋಕನ್ ಇಂಗ್ಲಿಷ್ ತರಬೇತಿಗೆ ವಿಶೇಷವಾಗಿ ಬೆಂಬಲಿಸಿದ ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರರನ್ನೂ ಸನ್ಮಾನಿಸಲಾಯಿತು.


ಸನ್ಮಾನವನ್ನು ಸ್ವೀಕರಿಸಿದ ಮಿರ್ಜಾನಿನ ಕನ್ನಡದ ಸಮೀರರು ಮಾತನ್ನಾಡಿ, ಕನ್ನಡದ ಜೊತೆಯಲ್ಲಿ ಇಂಗ್ಲೀಷನ್ನು ಕಲಿಯುವ ಅಗತ್ಯ ಮತ್ತು ಅನಿವಾರ್ಯತೆಗಳೆರಡೂ ಇದ್ದು, ಅನ್ಯ ರಾಜ್ಯಗಳಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಲು ಇಂಗ್ಲೀಷ್ ಭಾಷೆಯ ಜ್ಞಾನವು ಉಪಯುಕ್ತವಾಗಿದೆ ಎಂದರು.
ಸಮಾರೋಪ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು – ರಜಾ ದಿನಗಳನ್ನು ಪಠ್ಯೇತರವಾದ ಉಪಯುಕ್ತ ವಿಷಯದ ಕಲಿಕೆಗೆ ಲಭ್ಯ ಅವಕಾಶವನ್ನು ಬಳಸಿಕೊಂಡಿರುವ ವಿದ್ಯಾರ್ಥಿಗಳೇ ಭಾಗ್ಯಶಾಲಿಗಳೆಂದು ಹೇಳಿದರು.


ನಾಗರತ್ನಾ ಪಟಗಾರ್ ಸನ್ಮಾನಕ್ಕೆ ಪ್ರತಿಸ್ಪಂದನ ನುಡಿಯನ್ನಾಡಿದರು. ಶಿಬಿರಾರ್ಥಿಗಳಾದ ಗಾಯನ, ಶ್ರೀ ಲಕ್ಷ್ಮಿ ಹಾಗೂ ಸಹನಾ ಅನಿಸಿಕೆಯನ್ನು ವ್ಯಕ್ತಪಡಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯಾಧ್ಯಾಪಕರಾದ ಶಿವಚಂದ್ರ ಸ್ವಾಗತಿಸಿದರು. ಶಿಕ್ಷಕಿ ವಿಂದ್ಯ ಪಟಗಾರ ವಂದಿಸಿದರು. ಸವ್ಯಸಾಚಿ ಜನನಾಯಕ ಮಂಜುನಾಥ ಪಟಗಾರ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕ ಹರೀಶ್ ನಿರೂಪಿಸಿದರು. ಶಿಕ್ಷಕರಾದ ರಾಜೇಶ್ವರಿ ಶೆಟ್ಟಿ, ಹರ್ಷ ಹಾಗೂ ಮೋಹನ್ ಗೋವಿಂದ ಪಟಗಾರ ಮೊದಲಾದವರಿದ್ದರು.

About The Author

error: Content is protected !!