May 27, 2026

ಮುರಿನಕಟ್ಟೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ; ಸಮಾಜದ ಶಾಂತಿ ಹಾಳು ಮಾಡಬೇಡಿ: ಕಾಂಗ್ರೆಸ್ ತಿರುಗೇಟು

ಭಟ್ಕಳ: ಮುರಿನಕಟ್ಟೆ ಕಟ್ಟೆ ಕೆಡವಿದ ಘಟನೆಗೆ ಸಂಬAಧಿಸಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಧಾರ್ಮಿಕ ವಿಚಾರವನ್ನು ಮುಂದಿಟ್ಟುಕೊAಡು ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದರು. ಪಟ್ಟಣದ ರಂಗಿನಕಟ್ಟೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ವೆಂಕಟೇಶ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಜಿ ಶಾಸಕ ಸುನೀಲ್ ನಾಯ್ಕ ಅವರ ಆರೋಪಗಳಿಗೆ ಉತ್ತರಿಸಿದರು.

ಮುರಿನಕಟ್ಟೆ ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದು, ಅದರ ಬಗ್ಗೆ ನಮಗೂ ಗೌರವವಿದೆ. ಕಟ್ಟೆ ಕೆಡವಿದ ಘಟನೆ ನಮಗೂ ನೋವು ತಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂಬುದು ನಮ್ಮ ಆಗ್ರಹ. ಆದರೆ ಬಿಜೆಪಿ ಈ ವಿಚಾರವನ್ನು ರಾಜಕೀಯಕ್ಕೆ ಬಳಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸಚಿವ ಮಂಕಾಳ ವೈದ್ಯ ಅವರು ಮುರಿನಕಟ್ಟೆ ವಿರೋಧಿ ಅಲ್ಲ. ಈ ಬಗ್ಗೆ ಬಿಜೆಪಿಯವರು ಜನರಲ್ಲಿ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಆ ಜಾಗ ತೆರವುಗೊಂಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ವಿಚಾರ ಬಗೆಹರಿಸಬಹುದಾಗಿತ್ತು. ಆಗ ಮೌನವಾಗಿದ್ದವರು ಈಗ ಕಾಂಗ್ರೆಸ್ ಹಾಗೂ ಸಚಿವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುರಿನಕಟ್ಟೆ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷದ ಯಾವುದೇ ಅಭ್ಯಂತರವಿಲ್ಲ. ಸರ್ಕಾರವೇ ಕಟ್ಟೆ ನಿರ್ಮಾಣಕ್ಕೆ ಜಾಗ ಗುರುತಿಸಿ ಕೊಟ್ಟಿದೆ. ಎಲ್ಲರೂ ಒಮ್ಮತದಿಂದ ನಿರ್ಮಿಸೋಣ. ಆದರೆ ಧಾರ್ಮಿಕ ವಿಚಾರವನ್ನು ಮುಂದಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಬೇಡ ಎಂದು ಹೇಳಿದರು.
ಮೇ 24ರಂದು ಶಿರಾಲಿಯ ತಟ್ಟಿಹಕ್ಕಲ್ ಸಮುದ್ರ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಸಚಿವ ಮಂಕಾಳು ವೈದ್ಯ ಭೇಟಿ ನೀಡಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಅಲ್ಲಿಯೂ ರಾಜಕೀಯ ಮಾಡಲು ಯತ್ನಿಸಿದರು. ಶೋಕದ ಸಂದರ್ಭದಲ್ಲೂ ರಾಜಕೀಯ ಮಾಡಿರುವುದು ನೋವಿನ ಸಂಗತಿ ಎಂದು ಆಕ್ಷೇಪಿಸಿದರು.

ದೇವಾಲಯಗಳ ಕುರಿತು ಮಾತನಾಡುವ ಮೊದಲು ಸುನೀಲ ನಾಯ್ಕ ತಾವು ಎಷ್ಟು ದೇವಾಲಯಗಳಿಗೆ ನೆರವು ನೀಡಿದ್ದಾರೆ ಎನ್ನುವುದನ್ನು ತಿಳಿಸಲಿ. ನಮ್ಮ ಸಚಿವರು ಹಲವು ದೇವಾಲಯಗಳಿಗೆ ದೇಣಿಗೆ ನೀಡಿದ್ದು, ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು. ಪರಮೇಶ ಮೇಸ್ತ ಪ್ರಕರಣದ ಸಂದರ್ಭದಲ್ಲೂ ಇದೇ ರೀತಿಯಾಗಿ ಜನರನ್ನು ದಾರಿ ತಪ್ಪಿಸಲಾಗಿತ್ತು. ಅದರ ಪರಿಣಾಮ ಬಡ ಯುವಕರು ಸಂಕಷ್ಟ ಅನುಭವಿಸಿದರು. ಮತ್ತೆ ಅದೇ ಸ್ಥಿತಿ ಮರುಕಳಿಸಬಾರದು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಅಲ್ಲ. ಎಲ್ಲ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಿಲುವು ನಮ್ಮದು. ಅನಗತ್ಯ ಹೇಳಿಕೆಗಳನ್ನು ನೀಡಿ ಕೋಮು ಸಂಘರ್ಷಕ್ಕೆ ಕಾರಣವಾಗಬಾರದು ಎಂದು ಮನವಿ ಮಾಡಿದರು.

ರಾಮಾ ಮೋಗೇರ್, ಜಿಲ್ಲಾ ಉಪಾಧ್ಯಕ್ಷರು ಕಾಂಗ್ರೇಸ್ ಪಕ್ಷ, ನಾರಾಯಣ ನಾಯ್ಕ, ತಾಲೂಕಾ ಉಪಾಧ್ಯಕ್ಷ, ರಾಜು ನಾಯ್ಕ, ಗ್ಯಾರಂಟಿ ಯೋಜನೆ ತಾಲೂಕಾ ಅಧ್ಯಕ್ಷ, ಸುಧಾಕರ ನಾಯ್ಕ, ಭಟ್ಕಳ ನಗರ ಅಧ್ಯಕ್ಷ, ಜಯಶ್ರೀ ಮೋಗೆರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮಂಜುನಾಥ ನಾಯ್ಕ, ಗ್ಯಾರಾಂಟಿ ಯೋಜನೆಯ ಉಪಾಧ್ಯಕ್ಷ, ಭಾಸ್ಕರ ಮೋಗೆರ್ ಅವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

About The Author

error: Content is protected !!