ಸಿದ್ದಾಪುರ : ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಉರ್ದು ಶಾಲೆಯ ಶಿಥಿಲಾವಸ್ಥೆಯ ಕಟ್ಟಡದ ಸುತ್ತ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರವು 22 ಲಕ್ಷ ರೂ. ಅನುದಾನ ಮಂಜೂರು ಮಾಡಿರುವುದನ್ನು ವಿರೋಧಿಸಿ ಸಿದ್ದಾಪುರ ಬಿಜೆಪಿ ಮಂಡಲ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಬಾರದು ಎಂದು ಒತ್ತಾಯಿಸಿದರು. ಈಗಾಗಲೇ ಶಾಲೆಯಲ್ಲಿ ತರಗತಿಗಳು ನಡೆಯುತ್ತಿಲ್ಲ. ಹೀಗಾಗಿ ಆ ಜಾಗವನ್ನು ಸಿದ್ದಾಪುರ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆ ಮಾಡಬೇಕು. ಶಾಲಾ ಮಕ್ಕಳಿಗೆ ಬೇರೆಡೆ ಹೊಸ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಒಂದುವೇಳೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಳಿ ತಡೆಗೋಡೆ ನಿರ್ಮಿಸಿ ಶಾಲೆ ಪುನರಾರಂಭಿಸಿ ಅನಾಹುತಗಳು ನಡೆದರೆ ಅದಕ್ಕೆ ಶಾಸಕರು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ತಹಶೀಲ್ದಾರ್ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಪ್ರತಿಭಟನೆಯ ವೇಳೆ ತೋಟಪ್ಪ ನಾಯ್ಕ್, ಅನಂತಮೂರ್ತಿ ಹೆಗಡೆ, ನಂದನ್ ಬೋಕರ್, ಮಾರುತಿ ನಾಯ್ಕ್ ಹೊಸೂರ್ ಸೇರಿದಂತೆ ಹಲವರು ಮಾತನಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲಕಾಲ ಪ್ರತಿಭಟನಾಕಾರರು ಹಾಗೂ ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಇದೇ ವೇಳೆ, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಹಶೀಲ್ದಾರ್ ಮೌಖಿಕ ಭರವಸೆ ನೀಡಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.

22 ಲಕ್ಷ ರೂ. ವೆಚ್ಚದ ತಡೆಗೋಡೆ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ್ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾಮಗಾರಿ ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಈಗಾಗಲೇ ಎಚ್ಚರಿಕೆ ನೀಡಿತ್ತು. ಇದೀಗ ಅಧಿಕಾರಿಗಳು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಬಿಜೆಪಿ ತನ್ನ ಹೋರಾಟದ ಗೆಲುವು ಎಂದು ಘೋಷಿಸಿದೆ.
About The Author


More Stories
ನವರಾತ್ರಿ ಸಂಭ್ರಮ: ನಾಣಿಕಟ್ಟಾದಲ್ಲಿ 97ನೇ ‘ಯಕ್ಷ ವಂದನೆ – ಯಕ್ಷಪರ್ವ’ ಕಾರ್ಯಕ್ರಮ
ಆಗಸ್ಟ್ 15ರಂದು ನಾಣಿಕಟ್ಟಾದಲ್ಲಿ ‘ಯಕ್ಷ ಶ್ರಾವಣ’ ಗಾನ ವೈಭವ: ಯಕ್ಷರಂಗದ ದೈತ್ಯ ದಿಗ್ಗಜರ ಸಮಾಗಮ
ಸಮಾಜಮುಖಿ ಚಿಂತಕ, ಪುಸ್ತಕ ಪ್ರೇಮಿ ಕಮಲಾಕರ ಭಂಡಾರಿ ಇನ್ನಿಲ್ಲ: ದೇಹದಾನಕ್ಕೆ ತೀರ್ಮಾನ