June 7, 2026

ಕೃಷ್ಣಾ ನದಿ ಬರಿದು: ಅಥಣಿ ತಾಲೂಕಿನಲ್ಲಿ ಜಲಕ್ಷಾಮದ ಭೀತಿ; ಮಹಾರಾಷ್ಟ್ರದಿಂದ ನೀರು ಬಿಡಿಸಲು ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಆಗ್ರಹ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜೀವನಾಡಿಯಾಗಿರುವ ಕೃಷ್ಣಾ ನದಿಯ ನೀರು ತೀವ್ರವಾಗಿ ಬರಿದಾಗುತ್ತಿದ್ದು, ತಾಲೂಕಿನಾದ್ಯಂತ ಭೀಕರ ಜಲಕ್ಷಾಮ ತಲೆದೋರುವ ಮುನ್ಸೂಚನೆ ಲಭಿಸಿದೆ. ತಾಲೂಕಿನ ಹಲ್ಯಾಳ ಹಾಗೂ ದರೂರ್ ಗ್ರಾಮಗಳ ಸಂಪರ್ಕ ಕಲ್ಪಿಸುವ ಸೇತುವೆಯ ಕೆಳಗೆ ಹರಿಯುವ ಕೃಷ್ಣಾ ನದಿಯ ಒಡಲು ಈಗ ಸಂಪೂರ್ಣ ಖಾಲಿಯಾಗುತ್ತಿದ್ದು, ಇನ್ನು ಕೇವಲ ಮೂರ್ನಾಲ್ಕು ದಿನಗಳಲ್ಲಿ ನದಿ ಸಂಪೂರ್ಣವಾಗಿ ಬತ್ತಿ ಹೋಗುವ ಆತಂಕ ಎದುರಾಗಿದೆ. ಕೃಷ್ಣಾ ನದಿಯು ಬತ್ತಿ ಹೋದಲ್ಲಿ ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ಹಳ್ಳಿಗಳಿಗೆ ಕುಡಿಯುವ ನೀರಿನ ಭೀಕರ ಕೊರತೆ ಉಂಟಾಗಲಿದೆ. ಈ ಭಾಗದ ಸಾರ್ವಜನಿಕರು ಕುಡಿಯಲು, ಜನಜಾನುವಾರುಗಳ ಜೀವ ಉಳಿಸಲು ಹಾಗೂ ಬೆಳೆಗಳಿಗೆ ಪ್ರಮುಖವಾಗಿ ಕೃಷ್ಣೆಯ ನೀರನ್ನೇ ಆಶ್ರಯಿಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ನದಿ ಒಣಗಿದರೆ, ಜನಜಾನುವಾರುಗಳು ಕುಡಿಯುವ ನೀರಿಲ್ಲದೆ ತತ್ತರಿಸಬೇಕಾಗುತ್ತದೆ ಹಾಗೂ ಕೈಗೆ ಬಂದ ಬೆಳೆಗಳು ಒಣಗಿ ರೈತರು ಬೀದಿಗೆ ಬೀಳುವ ಕರುಣಾಜನಕ ಸ್ಥಿತಿ ನಿರ್ಮಾಣವಾಗಲಿದೆ.

ಮಂತ್ರಿ ಸ್ಥಾನದ ಹಂಬಲ ಬಿಟ್ಟು ಜನರ ಜೀವ ಉಳಿಸಿ: ಇಮ್ತಿಯಾಜ್ ಹಿಪ್ಪರಗಿ ತೀಕ್ಷ್ಣ ವಾಗ್ದಾಳಿ
ನದಿಯ ಪರಿಸ್ಥಿತಿಯನ್ನು ಕಂಡು ಕಳವಳ ವ್ಯಕ್ತಪಡಿಸಿರುವ ಜೆಡಿಎಸ್ ಪಕ್ಷದ ಮುಖಂಡರಾದ ಇಮ್ತಿಯಾಜ್ ಹಿಪ್ಪರಗಿ ಅವರು, ತಾಲೂಕಿನ ಸಮಸ್ತ ಸಾರ್ವಜನಿಕರ ಪರವಾಗಿ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ: “ಪಕ್ಕದ ರಾಜ್ಯವಾದ ಮಹಾರಾಷ್ಟ್ರದಿಂದ ನೀರು ತರುತ್ತೇವೆ ಎಂದು ಜನಪ್ರತಿನಿಧಿಗಳು ಹಲವಾರು ಬಾರಿ ಬಾಯಿಮಾತಿನ ಭರವಸೆಗಳನ್ನು ನೀಡಿದ್ದಾರೆಯೇ ಹೊರತು ಇದುವರೆಗೆ ನೀರನ್ನು ಬಿಡಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇಡೀ ತಾಲೂಕಿಗೆ ನೀರಿನ ಕೊರತೆ ಉಂಟಾಗುವ ಸಂಭವವಿದ್ದರೂ, ನಮ್ಮ ನಾಯಕರುಗಳು ಮುಖ್ಯಮಂತ್ರಿಗಳ ಬದಲಾವಣೆ ಹಾಗೂ ತಮಗೆ ಮಂತ್ರಿ ಸ್ಥಾನ ಪಡೆಯುವ ಹಂಬಲಕ್ಕಾಗಿ ಓಡಾಟ ನಡೆಸುತ್ತಿದ್ದಾರೆ. ನೀವು ಮಂತ್ರಿಗಳಾದರೆ ನಮಗೂ ಸಂತೋಷವೇ, ಆದರೆ ಮೊದಲು ಜನರ ಜೀವ ಉಳಿಸುವ ಕೆಲಸ ಮಾಡಿ.”

ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಲು ಒತ್ತಾಯ
“ಮಹಾರಾಷ್ಟ್ರದ ನಾಯಕರಾದ ದೇವೇಂದ್ರ ಫಡ್ನವೀಸ್ ಅವರ ಜೊತೆಗೆ ನಮ್ಮ ಭಾಗದ ನಾಯಕರ ಸಂಬAಧಗಳು ಚೆನ್ನಾಗಿವೆ. ಇತ್ತ ಕರ್ನಾಟಕದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೂ ಒತ್ತಡ ಹೇರಲು ಅವಕಾಶವಿದೆ. ನಾಯಕರು ಹಾಗೂ ಮಂತ್ರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಉಭಯ ಸರ್ಕಾರಗಳ ಮಟ್ಟದಲ್ಲಿ ಮಾತುಕತೆ ನಡೆಸಿ, ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸುವ ಕಾರ್ಯಕ್ಕೆ ಮುಂದಾಗಬೇಕು. ಕ್ಷೇತ್ರದ ಜನರಿಗಾಗಿ, ಮೂಕಪ್ರಾಣಿಗಳಿಗಾಗಿ ಹಾಗೂ ಬೆಳೆಗಳಿಗಾಗಿ ಕೃಷ್ಣೆಯನ್ನು ಬತ್ತಲು ಬಿಡಬೇಡಿ” ಎಂದು ಇಮ್ತಿಯಾಜ್ ಹಿಪ್ಪರಗಿ ಕಳಕಳಿಯ ವಿನಂತಿ ಮಾಡಿದ್ದಾರೆ.

ವ್ಯವಸ್ಥೆಯ ವಿರುದ್ಧ ಸಾರ್ವಜನಿಕರ ಪ್ರಶ್ನೆ!
ಅಥಣಿ, ಕಾಗವಾಡ, ಕುಡಚಿ ಹಾಗೂ ರಾಯಬಾಗ ಕ್ಷೇತ್ರದ ಶಾಸಕರುಗಳು ಸೇರಿದಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಈ ಗಂಭೀರ ಪರಿಸ್ಥಿತಿಯ ಕಡೆಗೆ ತಕ್ಷಣ ಗಮನಹರಿಸಬೇಕಾಗಿದೆ. ಇನ್ನಾದರೂ ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಸಂಬAಧಪಟ್ಟ ಸಚಿವರು ಎಚ್ಚೆತ್ತುಕೊಂಡು ಈ ಜ್ವಲಂತ ಸಮಸ್ಯೆಯನ್ನು ಬಗೆಹರಿಸುತ್ತಾರಾ? ಅಥವಾ ಎಂದಿನAತೆ ಯಥಾಸ್ಥಿತಿ ಮುಂದುವರಿಸಿ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಮಹೇಶ್ ಶರ್ಮಾ

About The Author

error: Content is protected !!