June 7, 2026

ಪೌಷ್ಟಿಕ ಆಹಾರದ ಸೇವನೆಯಿಂದ ಕ್ಷಯರೋಗ ಬೇಗ ಗುಣಮುಖ. – ತಾಲೂಕಾ ಆರೋಗ್ಯಾಧಿಕಾರಿ ಡಾ. ಮಧುಕರ ಪಾಟೀಲ.

ಶಿರಸಿ : ಪೌಷ್ಟಿಕ ಆಹಾರದ ಕೊರತೆಯಿಂದ ಕ್ಷಯ ರೋಗಿಯು ಬೇಗ ಚೇತರಿಸಿಕೊಳ್ಳಲಾರ.ಸೂಕ್ತ ಚಿಕಿತ್ಸೆಯ ಜೊತೆಗೆ ಪೌಷ್ಟಿಕ ಆಹಾರದ ಸೇವನೆಯಿಂದ ಮಾತ್ರ ಕ್ಷಯ ರೋಗಿಯನ್ನು ಬೇಗ ಗುಣಪಡಿಸಬಹುದು. ಇದು ಕ್ಷಯ ಮುಕ್ತ ಭಾರತದ ನಿರ್ಮಾಣಕ್ಕೆ ನಾಂದಿಯಾಗಿದೆ. ಕ್ಷಯರೋಗ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ದಿಶೆಯಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಮಧುಕರ ಪಾಟೀಲರವರು ಅಭಿಪ್ರಾಯಪಟ್ಟರು. ಅವರು ಶಿರಸಿಯ ಭಾರತ ಸೇವಾದಳ ಸಭಾಂಗಣದಲ್ಲಿ ತಾಲೂಕ ಆರೋಗ್ಯಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ನಡೆದ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕರಾದ ಶ್ರೀ ಉದಯಶಂಕರ ಭಂಡಾರಿ ಮಾತನಾಡಿ ವೈದ್ಯಾಧಿಕಾರಿಗಳು ಕೇವಲ ಚಿಕಿತ್ಸೆ ನೀಡುವುದಕಷ್ಟೇ ಅಲ್ಲ ಮಾನವೀಯ ನೆಲೆಯಲ್ಲಿ ಕೆಲಸ ಮಾಡಲು ತಾವು ಸದಾ ಸಿದ್ಧ. ರೋಗಿಗಳ ಜೊತೆ ನಾವು ಯಾವಾಗಲೂ ನಿಲ್ಲುತ್ತೇವೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಪೌಷ್ಟಿಕ ಆಹಾರದ ಬೆಂಬಲ ಕ್ಷಯ ರೋಗಿಗಳಿಗೆ ನಿಜವಾದ ಬಲವಾಗಿದೆ ಈ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ದಾನಿಗಳ ರೂಪದಲ್ಲಿ ಮುಂದೆ ಬರುವುದು ಶ್ಲಾಘನೀಯವಾದದ್ದು ಎಂದು ಹೇಳಿ ಕ್ಷಯ ರೋಗಿಗಳು ಪಾಲಿಸಬೇಕಾದ ವಿಧಾನಗಳನ್ನು ವಿವರಿಸಿದರು.

ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳಾದ ಡಾ. ಅಭಿಷೇಕ್ ರವರು ಮಾತನಾಡಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿ ಅದನ್ನು ಬುಡ ಸಮೇತ ಕಿತ್ತು ಹಾಕಿ ಕ್ಷಯ ಮುಕ್ತ ಭಾರತದ ಕಡೆ ಸಾಗಬೇಕಿದೆ ಎಂದರು. ಕಿಟ್ ವಿತರಿಸಿದ ದಾನಿಗಳಾದ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ ಮಧುಕರ ಪಾಟೀಲ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಜಯಶ್ರೀ, ಡಾ. ಸೌಮ್ಯಾ, ಡಾ. ಮಂಜುನಾಥ ಸೋರಟ್ಟಿ, ಡಾ. ಭಾರತಿ ಹೊಸಮನಿ, ಡಾ.ಹೇಮಂತ ಹೆಗಡೆ, ಡಾ. ದೀಪ್ತಿ ನಾಯಕ, ಆರೋಗ್ಯ ಸೇತು ವೈದ್ಯಾಧಿಕಾರಿಗಳಾದ ಡಾ. ನಿವೇದಿತಾ ನಾಯ್ಕ, ಆರ್ ಬಿ ಎಸ್ ಕೆ ವೈದ್ಯಾಧಿಕಾರಿಗಳಾದ ಡಾ. ರಾಜೇಶ ನಾಯ್ಕ, ಡಾ. ರಶ್ಮಿ ಹೆಗಡೆ, ಡಾ. ದೀಕ್ಷಾ ಪಟಗಾರ, ಡಾ. ಮಹೇಶ್ ಚಿಕ್ಕಳ್ಳಿ ಹಾಗೂ ಲವ್ಲಿನಾ ಕಾಂಚನಾ ಮುಂತಾದ ದಾನಿಗಳನ್ನು ಅಭಿನಂದಿಸ ಲಾಯಿತು.

ಈ ಸಮಯದಲ್ಲಿ ಸಿರಸಿ ತಾಲೂಕಿನ 25ಕ್ಕೂ ಅಧಿಕ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು,ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.

About The Author

error: Content is protected !!