ಭಟ್ಕಳ: ಅಳ್ವೆಕೋಡಿಯಲ್ಲಿ ಸಂಭವಿಸಿದ ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳ ಮಕ್ಕಳ ನೆರವಿಗೆ ಸಮಾಜ ಸದಾ ಸಿದ್ಧವಾಗಿರಬೇಕು. ಅವರಿಗೆ ಯಾವುದೇ ಸಮಸ್ಯೆಗಳು ಎದುರಾದರೆ ತಕ್ಷಣ ಸ್ಪಂದಿಸುವ ಮನೋಭಾವ ಎಲ್ಲರಲ್ಲೂ ಇರಬೇಕು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ದುರಂತದಲ್ಲಿ ಮೃತಪಟ್ಟ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ಅವರು, ಸಂತ್ರಸ್ತರಿಗೆ ಪ್ರಸಾದ ವಿತರಿಸಿ ಮಾತನಾಡಿದರು. ಘಟನೆ ನಡೆದ ಸಂದರ್ಭದಲ್ಲಿ ತಾವು ಅಯೋಧ್ಯೆಯಲ್ಲಿ ಇದ್ದುದಾಗಿ ತಿಳಿಸಿದ ಸ್ವಾಮೀಜಿ, ದುರಂತದ ಸುದ್ದಿ ತಿಳಿದ ತಕ್ಷಣ ಸಮಾಜದ ಮುಖಂಡರನ್ನು ಸಂಪರ್ಕಿಸಿ ನೆರವಿಗೆ ಮುಂದಾಗುವಂತೆ ಸೂಚಿಸಿದ್ದಾಗಿ ಹೇಳಿದರು. ಅಲ್ಲದೆ, ಮಂಕಾಳ ವೈದ್ಯ ಅವರಿಗೆ ಪರಿಹಾರ ಮೊತ್ತ ಹೆಚ್ಚಿಸುವ ಕುರಿತು ಸಲಹೆ ನೀಡಿದ್ದಾಗಿ ತಿಳಿಸಿದರು.
“ಇಂತಹ ದುರ್ಘಟನೆಗಳು ನಡೆಯಬಾರದು. ಆದರೆ ಕೆಲವೊಮ್ಮೆ ಮನುಷ್ಯನ ಲೆಕ್ಕಾಚಾರ ಮೀರಿದ ಘಟನೆಗಳು ಸಂಭವಿಸುತ್ತವೆ. ನಡೆದ ಘಟನೆಯ ನೋವಿನಲ್ಲಿ ಮುಳುಗದೇ, ಮುಂದಿನ ಜೀವನದ ಬಗ್ಗೆ ಚಿಂತಿಸಬೇಕು” ಎಂದು ಅವರು ಹೇಳಿದರು.

ಸಂತ್ರಸ್ತ ಕುಟುಂಬಗಳಲ್ಲಿರುವ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಯುವಕರಿಗೆ ಉದ್ಯೋಗ ಒದಗಿಸುವ ಕುರಿತು ಸಮಾಜದ ವಿವಿಧ ಹಣಕಾಸು ಸಂಸ್ಥೆಗಳು ವಿಶೇಷ ಗಮನ ಹರಿಸಬೇಕು. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ವಿವೇಚನಾ ಅಧಿಕಾರ ಬಳಸುವಂತೆ ಅವರು ಮನವಿ ಮಾಡಿದರು.
ಈ ವೇಳೆ ಕುಮಟಾ ಶ್ರೀರಾಮ ಸೇವಾ ಸಮಿತಿ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ತಲಾ ₹10 ಸಾವಿರ ನೆರವು ವಿತರಿಸಲಾಯಿತು.
ನಂತರ ನಾಮಧಾರಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಟ್ಕಳ ನಾಮಧಾರಿ ಒಕ್ಕೂಟ ನಡೆಸುತ್ತಿರುವ ನೆರವು ನಿಧಿ ಸಂಗ್ರಹ ಅಭಿಯಾನಕ್ಕೆ ₹1.15 ಲಕ್ಷ ಹಸ್ತಾಂತರಿಸಲಾಯಿತು. ಸಮಾಜದ ಅನೇಕ ಮುಖಂಡರು ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

More Stories
ಭಟ್ಕಳದಲ್ಲಿ ಜೂನ್ 18 ರಂದು ಕನ್ನಡದಲ್ಲಿ 100 ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಕಸಾಪದಿಂದ ಅಭಿನಂದನಾ ಸಮಾರಂಭ
ಶ್ರೀವಲಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ: ಮೊಬೈಲ್ ದಾಸರಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು
ರೈತ ಹೋರಾಟಗಾರ ಶ್ರೀಧರ ಎಸ್. ಹೆಬ್ಬಾರ ನಿಧನ: