June 19, 2026

ಉತ್ತರ ಕನ್ನಡ ಇಂದಿಗೂ ‘ಉತ್ತರವಿಲ್ಲದ’ ಜಿಲ್ಲೆಯಾಗಿಯೇ ಉಳಿದಿದೆ: ಹಿರಿಯ ಪತ್ರಕರ್ತ ಜಿ.ಯು. ಭಟ್ ಕಳಕಳಿ

ಹೊನ್ನಾವರ: ಬರವಣಿಗೆಯು ಸದಾ ದಾಖಲೆಯಾಗಿ ಉಳಿಯುತ್ತದೆ. ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಹಲವರು ಲೇಖನ ಹಾಗೂ ಪುಸ್ತಕಗಳನ್ನು ಬರೆದಿದ್ದರೂ, ಜಿಲ್ಲೆಯು ಇಂದಿಗೂ ನಿರೀಕ್ಷಿತ ಅಭಿವೃದ್ಧಿ ಕಾಣದಿರುವುದು ವಿಷಾದನೀಯ ಎಂದು ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಅಭಿಪ್ರಾಯಪಟ್ಟರು.


ತಾಲೂಕಿನ ಕಡತೋಕಾದ ಜನತಾ ವಿದ್ಯಾಲಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ದಿ. ಶಿವರಾಮ ಶಾಸ್ತ್ರಿ ಸ್ಮಾರಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ, ಹಿರಿಯ ಲೇಖಕ ಡಾ. ಜಿ.ವಿ. ಜೋಶಿ ಅವರು ರಚಿಸಿರುವ ‘ಉತ್ತರವಿಲ್ಲದ ಉತ್ತರ ಕನ್ನಡ ಜಿಲ್ಲೆ’ ಸೇರಿದಂತೆ ಮೂರು ಪ್ರಮುಖ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳ ಕಾರ್ಯವೈಖರಿಗೆ ಖಂಡನೆ

ನೂರಾರು ಮಹನೀಯರ ತ್ಯಾಗ ಮತ್ತು ಹೋರಾಟಗಳ ಹೊರತಾಗಿಯೂ ಉತ್ತರ ಕನ್ನಡ ಜಿಲ್ಲೆ ಇಂದಿಗೂ ಅಭಿವೃದ್ಧಿಯತ್ತ ಸಾಗದೆ, ತನ್ನ ಸಮಸ್ಯೆಗಳಿಗೆ ‘ಉತ್ತರ’ ಕಂಡುಕೊಳ್ಳದ ಜಿಲ್ಲೆಯಾಗಿಯೇ ಉಳಿದುಹೋಗಿದೆ ಎಂದು ಜಿ.ಯು. ಭಟ್ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯ ರಾಜಕೀಯ ಪರಿಸ್ಥಿತಿ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಬಂದ ಪ್ರಾಮಾಣಿಕರನ್ನೆಲ್ಲಾ ನಾವು ಚುನಾವಣೆಯಲ್ಲಿ ಸೋಲಿಸಿದ್ದೇವೆ. ಮತ್ತೊಂದೆಡೆ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಗಳಿಗೆ ತೆರಳಿ ಸುಳ್ಳು ಪ್ರಮಾಣ ಮಾಡಿ, ಶಾಲು ಹೊದಿಸಿಕೊಂಡು ಬರುವ ಜನಪ್ರತಿನಿಧಿಗಳಿಂದ ನಮ್ಮ ಜಿಲ್ಲೆಯ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವೇ?” ಎಂದು ಖಾರವಾಗಿ ಪ್ರಶ್ನಿಸಿದರು.
“ಜಿಲ್ಲೆಯಲ್ಲಿ ದಶಕಗಳಿಂದಲೂ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗುತ್ತಿಲ್ಲ. ನಮ್ಮಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕನಿಷ್ಠ ಪ್ರಯತ್ನವನ್ನೂ ನಮ್ಮ ಜಿಲ್ಲೆಯ ನಾಯಕರು ಮಾಡಿಲ್ಲ. ಪರಿಣಾಮವಾಗಿ, ಇಂದಿಗೂ ಉನ್ನತ ಶಿಕ್ಷಣಕ್ಕಾಗಿ ಯುವಜನತೆ ಹಾಗೂ ತುರ್ತು ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಗಳನ್ನು ಅವಲಂಬಿಸುವಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಪುಸ್ತಕ ಬರೆಯುವುದರಿಂದಲೋ ಅಥವಾ ಓದುವುದರಿಂದಲೋ ಸಮಾಜದಲ್ಲಿ ದಿಢೀರ್ ಬದಲಾವಣೆ ಆಗದು, ಆದರೆ ಮುಂದಿನ ದಿನಗಳಲ್ಲಾದರೂ ಒಳ್ಳೆಯದಾಗುತ್ತದೆ ಎನ್ನುವ ದೃಢ ಭರವಸೆಯೊಂದಿಗೆ ಮುನ್ನಡೆಯಬೇಕಿದೆ” ಎಂದು ಅವರು ಕರೆ ನೀಡಿದರು.

ನಿಸರ್ಗವೇ ನಮ್ಮ ದೊಡ್ಡ ಸಂಪತ್ತು: ಮುರುಳಿಧರ ಪ್ರಭು

“ಅರ್ಥಶಾಸ್ತ್ರದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಗಾಗಿ ಒಂದು ಶೋಧ” ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಪ್ರಮುಖ ಉದ್ಯಮಿ ಮುರುಳಿಧರ ಪ್ರಭು ಅವರು, “ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದರೂ, ನಾವು ಹಸಿರನ್ನು ಉಳಿಸಿಕೊಂಡಿದ್ದೇವೆ; ಅದೇ ನಮಗೆ ದೊಡ್ಡ ಸಂಪತ್ತಾಗಿದೆ. ಸದ್ಯ ಕೇವಲ 3% ಜನರು, 80% ಜನರನ್ನು ಒಡೆಯರಾಗಿ ಆಳುತ್ತಿದ್ದಾರೆ. ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದಿಂದ ಮುಂದಿನ ಭವಿಷ್ಯ ಮತ್ತಷ್ಟು ಭಯಾನಕವಾಗಿರಲಿದೆ” ಎಂದು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ಅವರು, “ಚಾಣಾಕ್ಯನ ಅರ್ಥಶಾಸ್ತ್ರ ಇಂದಿಗೂ ಪ್ರಸ್ತುತವಾಗಿದೆ. ಆರ್ಥಿಕತೆ ಒಬ್ಬರಲ್ಲೇ ಕ್ರೋಢೀಕರಣಗೊಂಡರೆ ದೇಶಕ್ಕೆ ಸಮಸ್ಯೆ ಉಂಟಾಗುತ್ತದೆ. ಎಲ್ಲರನ್ನೂ ಒಳಗೊಳ್ಳುವುದು ನಮ್ಮ ನೆಲದ ಗುಣ. ವಿದೇಶಿಗರು ನಿಸರ್ಗವನ್ನು ಭೋಗಿಸಲು ಕಲಿತು ಬೆಳೆದರೆ, ಭಾರತೀಯರು ನಿಸರ್ಗವನ್ನು ಪೂಜಿಸುವುದನ್ನು ರೂಢಿಸಿಕೊಂಡಿದ್ದಾರೆ” ಎಂದರು.

ಅರ್ಥಶಾಸ್ತ್ರ ಜನರ ಬಳಿಗೆ ತಲುಪಬೇಕು: ಡಾ. ಡಿ.ಎಲ್. ಹೆಬ್ಬಾರ್

“ಸೈದ್ಧಾಂತಿಕ ಮತ್ತು ವಲಯ ಆಧಾರಿತ ಅರ್ಥಶಾಸ್ತ್ರ” ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ನಿವೃತ್ತ ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ್ ಮಾತನಾಡಿ, “ಗುರುವಿನ ವಿಚಾರವನ್ನು ಮುಂದಿನ ತಲೆಮಾರಿಗೆ ತಲುಪಿಸುವುದೇ ಶಿಷ್ಯ ನೀಡುವ ದೊಡ್ಡ ಕಾಣಿಕೆ. ಕೃಷಿ, ಹಣಕಾಸು ಹಾಗೂ ಗ್ರಾಮೀಣಾಭಿವೃದ್ಧಿಯ ಹಲವು ಪ್ರಮುಖ ವಿಷಯಗಳನ್ನು ಈ ಪುಸ್ತಕ ಒಳಗೊಂಡಿದೆ. ಅರ್ಥಶಾಸ್ತ್ರ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಸುವ ವಿಷಯವಾಗದೇ, ಜನರಿಗೆ ಅಗತ್ಯ ಮಾಹಿತಿ ನೀಡುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಲೇಖಕ ಡಾ. ಜಿ.ವಿ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯ ಕುರಿತು ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಶಂಭು ಭಟ್ ವಹಿಸಿದ್ದರು.
ವೇದಿಕೆಯಲ್ಲಿ ನ್ಯಾಯವಾದಿ ಅಮಿತಾ ಭಾಗವತ್, ಕೊಂಕೇರಿ ಪ್ರತಿನಿಧಿ ಅನಸೂಯಾ ಭಟ್, ಯಕ್ಷಗಾನ ಅರ್ಥಧಾರಿ ಜಿ.ವಿ. ಹೆಗಡೆ, ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಎಸ್.ಗಿ. ಹೆಗಡೆ ಹಾಗೂ ಚಿಂತನಾಶೀಲ ಬರಹಗಾರ ಶಂಕರ ನಾರಾಯಣ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯೆ ದುರ್ಗಮ್ಮ ಪಿ.ಎಚ್. ಸ್ವಾಗತಿಸಿದರು, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಡಿ.ಎನ್. ವೈದ್ಯ ವಂದಿಸಿದರು. ಶಿಕ್ಷಕ ಪ್ರದೀಪ ಖರ್ವಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

About The Author

error: Content is protected !!