ಭಟ್ಕಳ: ಯೋಗವು ಭಾರತೀಯ ಸನಾತನ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಭಾರತ್ ಸ್ವಾಭಿಮಾನ ಟ್ರಸ್ಟ್‌ನ ತಾಲೂಕು ಪ್ರಭಾರಿ ಸತೀಶ್ ಕುಮಾರ್ ಹೇಳಿದರು. ಅಳ್ವೇಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ಆರೋಗ್ಯ ಭಾರತಿ ಟ್ರಸ್ಟ್ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ಅಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಎದುರಿನ ಬಂದರು ಆವರಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಯೋಗ ಜಗತ್ತಿಗೆ ಭಾರತದ ಕೊಡುಗೆ
ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಯೋಗದ ಮೂಲಕ ಆಧ್ಯಾತ್ಮಿಕ ಸಾಧನೆ ಮತ್ತು ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದರು. ಇಂದು ಯೋಗವು ವಿಶ್ವದಾದ್ಯಂತ ಮಾನ್ಯತೆ ಪಡೆದಿದ್ದು, ಭಾರತವನ್ನು ಜಗತ್ತಿಗೆ ಯೋಗದ ಮಾರ್ಗದರ್ಶಕ ರಾಷ್ಟ್ರವನ್ನಾಗಿ ಗುರುತಿಸಿದೆ ಎಂದ ಸತೀಶ್ ಕುಮಾರ್, ‘ಮಾತು ಬಲ್ಲವನಿಗೆ ಜಗಳವಿಲ್ಲ, ಯೋಗ ಬಲ್ಲವನಿಗೆ ರೋಗವಿಲ್ಲ’ ಎಂಬ ನುಡಿಯು ಇಂದಿನ ಜೀವನಶೈಲಿಯಲ್ಲಿ ಇನ್ನಷ್ಟು ಪ್ರಸ್ತುತವಾಗಿದೆ. ಯೋಗವನ್ನು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಬದುಕಿನ ಭಾಗವಾಗಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಯಾಂತ್ರಿಕ ಜೀವನಕ್ಕೆ ಯೋಗದ ಅಗತ್ಯವಿದೆ
ದೇವಾಲಯದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ಮಾತನಾಡಿ, ಹಿಂದಿನ ಪೀಳಿಗೆಯವರು ಶಾರೀರಿಕ ಶ್ರಮದ ಜೀವನ ನಡೆಸುತ್ತಿದ್ದ ಕಾರಣ ಅವರಿಗೆ ಸಹಜವಾಗಿಯೇ ವ್ಯಾಯಾಮ ದೊರೆಯುತ್ತಿತ್ತು. ಆದರೆ ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಅಗತ್ಯ ಹೆಚ್ಚಾಗಿದೆ ಎಂದರು. ತಾಲೂಕು ಪತಂಜಲಿ ಸಮಿತಿಯ ಪ್ರಭಾರಿ ದುರ್ಗಾದಾಸ್ ನಾಯ್ಕ, ದೇವಾಲಯದ ಆಡಳಿತ ಮಂಡಳಿಯ ಸದಸ್ಯ ನಾರಾಯಣ ದೈಮನೆ ಹಾಗೂ ಶಿರಾಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ಧೈಮನೆ ಯೋಗದ ಮಹತ್ವ ಕುರಿತು ಮಾತನಾಡಿದರು.

ನೂರಾರು ಜನರಿಂದ ಸಾಮೂಹಿಕ ಯೋಗಾಭ್ಯಾಸ
ವಿಶೇಷ ಪ್ರದರ್ಶನ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮುಂಜಾನೆ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ನೂರಾರು ಯೋಗಾಸಕ್ತರು ಭಾಗವಹಿಸಿ ಗಮನ ಸೆಳೆದರು. ಆಯುಷ್ ಇಲಾಖೆಯ ಆರೋಗ್ಯಾಧಿಕಾರಿ ಮಾನಸ ಹಾಗೂ ಪ್ರದೀಪ್ ನಾಯ್ಕ ಕಾಶ್ಮಡಿ ಯೋಗ ತರಬೇತಿ ನೀಡಿದರೆ, ಮಂಜುನಾಥ ಕೋಡಿಹಿತ್ತಲ ಅವರು ವಿಶೇಷ ಯೋಗಾಸನಗಳ ಪ್ರದರ್ಶನ ನೀಡಿದರು.
ವೇದಿಕೆಯಲ್ಲಿ ದುರ್ಗಾಪರಮೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಹನುಮಂತ ನಾಯ್ಕ, ಅರವಿಂದ ಪೈ, ಗಜಾನನ ಪುರಾಣಿಕ, ಮಂಜುನಾಥ ಕೋಡಿಹಿತ್ತಲ, ಪತಂಜಲಿ ಮಹಿಳಾ ಪ್ರಭಾರಿ ಲತಾ ನಾಗರಾಜ ನಾಯ್ಕ, ಮಂಜುನಾಥ ದೈಮನೆ ಹಾಗೂ ಉದ್ಯಮಿ ಬಾಬು ಮೊಗೇರ್ ಉಪಸ್ಥಿತರಿದ್ದರು.
ಪತಂಜಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಸ್ವಾಗತಿಸಿದರು, ಲತಾ ವಾಸು ನಾಯ್ಕ ಪ್ರಾರ್ಥನೆ ನೆರವೇರಿಸಿದರು ಹಾಗೂ ಶಿಕ್ಷಕಿ ರಾಜವಿ ಮೊಗೇರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿ ಮುಕ್ತಾಯದ ಬಳಿಕ ಭಾಗವಹಿಸಿದ ಎಲ್ಲಾ ಯೋಗಾಸಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

More Stories
ಪ್ರತಿಷ್ಠಿತ ‘ಡಿಜಿ-ಐಜಿಪಿ ಶ್ಲಾಘನಾ ಪದಕ’ ಗೌರವಕ್ಕೆ ಭಾಜನರಾದ ಭಟ್ಕಳದ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕ
ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ಸಿಗೆ ಇಲಾಖೆಗಳ ಸಮನ್ವಯ ಅಗತ್ಯ: ಪ್ರಭಾರಿ ತಹಶೀಲ್ದಾರ್ ಪ್ರವೀಣ್ ಕಾರಂಡೆ
ಸಿಎ ಅಂತಿಮ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಪ್ರಜ್ವಲ್ ಗೋಳಿ ಮತ್ತು ಪ್ರಸಾದ ಶೆಟ್ಟಿ ಸಾಧನೆ