June 24, 2026

ಭಟ್ಕಳದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಸೂಚನೆ; ಎಡಿಜಿಪಿ ಹಿತೇಂದ್ರ ಹಾಗೂ ಐಜಿಪಿ ಅಮಿತ್ ಸಿಂಗ್ ಅವರಿಂದ ಅಧಿಕಾರಿಗಳ ಮಹತ್ವದ ಸಭೆ

ಭಟ್ಕಳ: ಇತ್ತೀಚಿನ ದಿನಗಳಲ್ಲಿ ಭಟ್ಕಳದಲ್ಲಿ ನಡೆದ ಕೆಲ ಘಟನೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿಗತಿಗಳ ಪರಿಶೀಲನೆಗಾಗಿ ರಾಜ್ಯ ಪೊಲೀಸ್ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಹಾಗೂ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರು ಭಟ್ಕಳಕ್ಕೆ ಜಂಟಿ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಗಳ ಕಾರ್ಯವೈಖರಿಯನ್ನು ಪರಿಶೀಲಿಸಿದ ಬಳಿಕ ನಡೆದ ಈ ಸಭೆಯಲ್ಲಿ, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗುವ ಯಾವುದೇ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಮುನ್ನೆಚ್ಚರಿಕಾ ಕ್ರಮಗಳನ್ನು ಬಲಪಡಿಸಲು ನಿರ್ದೇಶನ

ಇತ್ತೀಚೆಗೆ ನಡೆದ ವಿವಿಧ ಪ್ರಕರಣಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡ ಹಿರಿಯ ಅಧಿಕಾರಿಗಳು, ಮುನ್ನೆಚ್ಚರಿಕಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಯಾವುದೇ ಸಂಘಟನೆ, ವ್ಯಕ್ತಿ ಅಥವಾ ಗುಂಪು ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು. ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡುವ ಪ್ರಯತ್ನಗಳು ಕಂಡುಬಂದಲ್ಲಿ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಯಾವುದೇ ಪಕ್ಷಪಾತವಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.

ಸಾಮಾಜಿಕ ಜಾಲತಾಣಗಳು ಹಾಗೂ ವದಂತಿಗಳ ಮೇಲೆ ತೀವ್ರ ನಿಗಾ

ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುವ ಸುಳ್ಳು ಮಾಹಿತಿ, ವದಂತಿಗಳು ಹಾಗೂ ಪ್ರಚೋದನಾತ್ಮಕ ಸಂದೇಶಗಳ ಮೇಲೆ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶಾಂತಿ ಕದಡುವ ಪ್ರಯತ್ನಗಳ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಣೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆಯನ್ನು ಬಲಪಡಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ಪೊಲೀಸ್ ಪೆಟ್ರೋಲಿಂಗ್ ಹಾಗೂ ನಿಗಾ ಮುಂದುವರಿಸಲು ಸಲಹೆ ನೀಡಲಾಯಿತು.

ಉನ್ನತ ಮಟ್ಟದ ಈ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದಿಲೀಪ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಕೃಷ್ಣಮೂರ್ತಿ, ಭಟ್ಕಳ ಡಿವೈಎಸ್ಪಿ ಗಿರೀಶ್ ಬಿ. ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವೃತ್ತ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ಭಾಗವಹಿಸಿದ್ದರು. ಹಿರಿಯ ಅಧಿಕಾರಿಗಳು ಜಿಲ್ಲೆಯ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ಸಂಪೂರ್ಣ ಮಾಹಿತಿ ಪಡೆದು, ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಅಗತ್ಯ ಮಾರ್ಗದರ್ಶನ ನೀಡಿದರು.

About The Author

error: Content is protected !!