ಹೊನ್ನಾವರ/ಭಟ್ಕಳ: ಒಬ್ಬನೇ ಒಬ್ಬ ಅರ್ಹ ಮತದಾರ ಮತದಾನದಿಂದ ವಂಚಿತ ಆಗಬಾರದು ಮತ್ತು ಅನರ್ಹರನ್ನು ದೇಶದ ಚುನಾವಣಾ ಪ್ರಕ್ರಿಯೆಯಿಂದ ದೂರವಿಡಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಆಯೋಗವು ಸಾಂವಿಧಾನಾತ್ಮಕವಾಗಿ ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ಈಶ್ವರ ನಾಯ್ಕ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಶೇಷ ಸಮಗ್ರ ಪರಿಷ್ಕರಣೆಯ ಮಹತ್ವ ಹಾಗೂ ಇದರ ಸುತ್ತ ನಡೆಯುತ್ತಿರುವ ರಾಜಕೀಯ ಅಪಪ್ರಚಾರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಮನೆಮನೆಗೆ ಬಿ.ಎಲ್.ಓ ಭೇಟಿ: ನಾಗರಿಕರ ಸಹಕಾರ ಅಗತ್ಯ
ರಾಜ್ಯದಲ್ಲಿ ಈಗಾಗಲೇ ವಿಶೇಷ ಸಮಗ್ರ ಪರಿಷ್ಕರಣೆಗೆ ಚಾಲನೆ ದೊರೆತಿದ್ದು, ಬಿ.ಎಲ್.ಓ.ಗಳು (ಮತಗಟ್ಟೆ ಅಧಿಕಾರಿಗಳು) ಮನೆಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಚುನಾವಣಾ ಆಯೋಗ ನಿಗದಿಪಡಿಸಿದಂತೆ ಅವರು ಕೇಳುವ ಅಧಿಕೃತ ಮಾಹಿತಿಗಳನ್ನು ಒದಗಿಸಿಕೊಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ನೆನಪಿಸಿದ್ದಾರೆ.

ವಿಪಕ್ಷಗಳ ನಡೆಗೆ ತರಾಟೆ
ಕಾಂಗ್ರೆಸ್ ಸೇರಿದಂತೆ ದೇಶದ ವಿರೋಧಪಕ್ಷಗಳು ಈ ವಿಶೇಷ ಪರಿಷ್ಕರಣೆಯ ವಿರುದ್ಧ ಜನರಲ್ಲಿ ತಪ್ಪುಕಲ್ಪನೆ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಅವರು, ಟಿಎಂಸಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಇದರ ವಿರುದ್ಧ ವಾದಿಸಲು ಹೋಗಿ ನ್ಯಾಯಾಲಯದಲ್ಲಿ ಮಂಗಳಾರತಿ ಮಾಡಿಸಿಕೊಂಡಿವೆ ಎಂದರು.
“ಸಂವಿಧಾನ ಬಾಹಿರವಾಗಿ ಏಕಕಾಲದಲ್ಲಿ ಮೂರ್ನಾಲ್ಕು ಕಡೆ ಮತದಾರರ ಗುರುತಿನ ಚೀಟಿ ಹೊಂದಿರುವ ಪ್ರಕಾಶ್ ರೈ, ಭಾರತದ ಪೌರತ್ವವನ್ನೂ ಪಡೆಯದ ಚೇತನ್ ಇಂತೋರೆಲ್ಲಾ ಸೇರಿಕೊಂಡು ವಿಶೇಷ ಮತದಾರರ ಪರಿಷ್ಕರಣೆಯ ಪ್ರತಿರೋಧ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿರುವುದು ಸರಿಯಲ್ಲ. ಇದು ಬಿಜೆಪಿಯನ್ನು ಗೆಲ್ಲಿಸಲು ಚುನಾವಣಾ ಆಯೋಗ ಮಾಡುತ್ತಿರುವ ಪ್ರಕ್ರಿಯೆ ಎನ್ನುವ ಅವರ ವ್ಯಾಖ್ಯಾನ ಹಾಸ್ಯಾಸ್ಪದ” ಎಂದು ಶ್ರೀ ಈಶ್ವರ ನಾಯ್ಕ ಲೇವಡಿ ಮಾಡಿದ್ದಾರೆ.
ಹೆಸರು ವಜಾಗೊಳಿಸುವ ಆರೋಪದಲ್ಲಿ ಹುರುಳಿಲ್ಲ
ಬಿಜೆಪಿಯೇತರ ಮತದಾರರ ಹೆಸರನ್ನು ವೋಟರ್ ಲಿಸ್ಟ್‌ನಿಂದ ಡಿಲೀಟ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ ಅವರು, ಯಾವೊಬ್ಬನ ಹೆಸರನ್ನೂ ಸುಖಾಸುಮ್ಮನೆ ತೆಗೆದುಹಾಕುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಪಟ್ಟಿಯಲ್ಲಿರುವ ಹೆಸರಿಗೂ, ವ್ಯಕ್ತಿ ನೀಡಿರುವ ಮಾಹಿತಿಗೂ ತಾಳೆಯಾಗದಿದ್ದರೆ ಅಥವಾ ಮಾಹಿತಿ ಅಪೂರ್ಣವಾಗಿದ್ದರೆ ಆಯೋಗವು ನೋಟೀಸ್ ನೀಡಿ ಸೂಕ್ತ ಕಾಲಾವಕಾಶ ನೀಡುತ್ತದೆ. ಆ ಸಮಯದಲ್ಲಿ ಅಗತ್ಯ ದಾಖಲೆ ಸಲ್ಲಿಸಲು ಅವಕಾಶವಿರುತ್ತದೆ. ಒಂದು ವೇಳೆ ಅನ್ಯಾಯವಾದರೆ ನ್ಯಾಯಾಲಯದ ಮೆಟ್ಟಿಲೇರುವ ಅಧಿಕಾರವೂ ಮತದಾರನಿಗಿರುತ್ತದೆ ಎಂದು ವಿವರಿಸಿದರು.
ಈಗಾಗಲೇ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಪಕ್ಷಗಳು ಆರೋಪಿಸುವಂತೆ ಅರ್ಹ ಪ್ರಜೆಗಳ ಹಕ್ಕನ್ನು ಕಿತ್ತುಕೊಂಡಿದ್ದರೆ ಬಿಹಾರ ಅಥವಾ ಪಶ್ಚಿಮ ಬಂಗಾಳದಲ್ಲಿ ಎಷ್ಟು ಜನರು ದೂರು ದಾಖಲಿಸಿದ್ದಾರೆ? ಅಂತಹ ಯಾವುದೇ ನಿದರ್ಶನಗಳಿಲ್ಲ ಎಂದ ಅವರು, ವಿಪಕ್ಷಗಳದ್ದು ಕೇವಲ ಗುಲ್ಲೆಬ್ಬಿಸುವ ಕೆಲಸ ಎಂದು ದೂರಿದರು. ಕೋವಿಡ್ ವ್ಯಾಕ್ಸಿನ್ ವಿಷಯದಲ್ಲಿಯೂ ಇದೇ ರೀತಿ ಅಪಪ್ರಚಾರ ಮಾಡಿ, ಆಮೇಲೆ ಹಿಂಬಾಗಿಲಲ್ಲಿ ಹೋಗಿ ತಾವೇ ಮೊದಲು ಲಸಿಕೆ ಹಾಕಿಸಿಕೊಂಡ ಕಾಂಗ್ರೆಸ್ ನಾಯಕರ ನಡೆ ಇತಿಹಾಸ ಎಂದರು.
ಹಳ್ಳಿಕಟ್ಟೆ ಹರಟೆ ಬಿಟ್ಟು ಜವಾಬ್ದಾರಿಯಿಂದ ವರ್ತಿಸಿ
“ಕಾಲ ಮಿಂಚಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ವಿಶೇಷ ಮತದಾರರ ಪರಿಷ್ಕರಣೆಯ ವಿರುದ್ಧ ಹುರುಳಿಲ್ಲದ ಆರೋಪ ಮಾಡುವ ಬದಲು, ಇಲ್ಲಿ ಅವರದ್ದೇ ಸರ್ಕಾರವಿರುವುದರಿಂದ ಆಯೋಗದ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಿ. ಅದನ್ನು ಬಿಟ್ಟು ಹಳ್ಳಿಕಟ್ಟೆಯಲ್ಲಿ ಹರಟೆ ಹೊಡೆಯುವವರಂತೆ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಾ ಜನಸಾಮಾನ್ಯರ ದಿಕ್ಕುತಪ್ಪಿಸಲು ಪ್ರಯತ್ನಿಸುವುದು ಶೋಭೆ ತರುವುದಿಲ್ಲ” ಎಂದು ಈಶ್ವರ ನಾಯ್ಕ ಎಚ್ಚರಿಸಿದ್ದಾರೆ.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ನೀಲಗೋಡ ಯಕ್ಷಚೌಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಅಮವಾಸ್ಯೆ ವಿಶೇಷ ಪೂಜೆ: ಭಕ್ತರ ಕಷ್ಟ ಕಾರ್ಪಣ್ಯ ನೀಗಿಸುವ ಶಕ್ತಿ ಕ್ಷೇತ್ರ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ