- ಮುರ್ಡೇಶ್ವರದಲ್ಲಿ ಜಾಗೃತಿ ಅಭಿಯಾನ, ಮಾವಿನಕುರ್ವೆಯಲ್ಲಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ
ಭಟ್ಕಳ: ತಾಲ್ಲೂಕು ಪಂಚಾಯತ್ ಸ್ವೀಪ್ (SVEEP) ಸಮಿತಿಯ ಸಹಯೋಗದಲ್ಲಿ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ತಾಲ್ಲೂಕಿನ ವಿವಿಧೆಡೆ ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಮುರ್ಡೇಶ್ವರದಲ್ಲಿ ಮತದಾರರ ಜಾಗೃತಿ:
ಪ್ರಸಿದ್ಧ ಪ್ರೇಕ್ಷಣೀಯ ತಾಣವಾದ ಮುರ್ಡೇಶ್ವರದಲ್ಲಿ ತಾಲ್ಲೂಕು ಪಂಚಾಯತ್ ಸ್ವೀಪ್ ಸಮಿತಿಯ ಸಹಯೋಗದೊಂದಿಗೆ ಮಾವಳ್ಳಿ-2 ಗ್ರಾಮ ಪಂಚಾಯತ್ ವತಿಯಿಂದ ವಿಶೇಷ ಮತದಾರರ ಜಾಗೃತಿ ಕಾರ್ಯಕ್ರಮ ಜರುಗಿತು. ಸಾರ್ವಜನಿಕರು ಹಾಗೂ ಪ್ರವಾಸಿಗರಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಪರ್ಣಾ ನಾಯ್ಕ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಾವಿನಕುರ್ವೆಯಲ್ಲಿ ಮಾನವ ಸರಪಳಿ:
ಮಾವಿನಕುರ್ವೆ ಗ್ರಾಮ ಪಂಚಾಯತ್ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮತದಾರರ ಜಾಗೃತಿ ಮೂಡಿಸುವ ವಿಶಿಷ್ಟ ಅಭಿಯಾನ ನಡೆಯಿತು. ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪಂಚಾಯತ್ ಕಾರ್ಯದರ್ಶಿ ಸಂಜಯ್ ಕೋಚೇರಿ, ಶಾಲಾ ಮುಖ್ಯಾಧ್ಯಾಪಕರಾದ ಗಜಾನನ ಹೆಗಡೆ, ಶಿಕ್ಷಕರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಿಗೆ ಕಾರ್ಯಾಗಾರ:
ಇದೇ ವೇಳೆ ಭಟ್ಕಳ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ NRLM ಸಂಜೀವಿನಿ ಒಕ್ಕೂಟದ ತಾಲ್ಲೂಕು ಮಟ್ಟದ ಪದಾಧಿಕಾರಿಗಳಿಗಾಗಿ ಸ್ವೀಪ್ ಸಮಿತಿಯ ವತಿಯಿಂದ ಮಹತ್ವದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಿಗೆ ‘SIR ಅರ್ಜಿ ನಮೂನೆ’ ಭರ್ತಿ ಮಾಡುವ ಕುರಿತಾಗಿ ಈ ತರಬೇತಿ ನೀಡಲಾಯಿತು.
ಕಾರ್ಯಾಗಾರದಲ್ಲಿ ತಾಲ್ಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ತಾಲ್ಲೂಕು ಯೋಜನಾಧಿಕಾರಿ ಹೇಮಾ ನಾಯ್ಕ, ವಿಷಯ ನಿರ್ವಾಹಕ ರಾಘವೇಂದ್ರ ಪೂಜಾರಿ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶಾಂತಿಕಾ ನಾಯಕ, ಗೋಪಾಲ ನಾಯ್ಕ ಹಾಗೂ ವೆಂಕಟೇಶ ದೇವಾಡಿಗ ಉಪಸ್ಥಿತರಿದ್ದರು. ಉಷಾ ದೇವಡಿಗ ಮತ್ತು ವಿದ್ಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ