September 10, 2026

ಕತಾರ್‌ನಲ್ಲಿ ಕನ್ನಡಿಗ ಶಿಕ್ಷಕರಿಗೆ ಸನ್ಮಾನ: ಕರ್ನಾಟಕ ಸಂಘ ಕತಾರ್‌ನಿಂದ ವಿಜೃಂಭಣೆಯ ಶಿಕ್ಷಕರ ದಿನಾಚರಣೆ

ದೋಹಾ (ಕತಾರ್): ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವನ್ನು ಸ್ಮರಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕತಾರ್ (ಕೆಎಸ್‍ಕೆ) ವತಿಯಿಂದ ದೋಹಾದ ಅಶೋಕ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಂಘದ ಮಕ್ಕಳ ಸಾಂಪ್ರದಾಯಿಕ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಸ್ವಾಗತಿಸಿದರು. ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮಾತನಾಡಿ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವನ್ನು ಸ್ಮರಿಸಿದರು.

ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ ಸಂದೀಪ್ ಕುಮಾರ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಅಭಿಲಾಷಾ ಪನ್ವಾರ್, ಆಸ್ನಾ ನಫೀಸ್, ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್, ಫೈಸಲ್ ಅಲ್-ದೋಸಾರಿ, ಕತಾರ್ ಆಂತರಿಕ ಸಚಿವಾಲಯದ ಅಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.

125 ಕನ್ನಡಿಗ ಶಿಕ್ಷಕರಿಗೆ ಗೌರವ: ಕತಾರ್‌ನ ವಿವಿಧ ಪ್ರಮುಖ ಶಾಲಾ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಜೊತೆಗೆ ಕತಾರ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 125 ಕರ್ನಾಟಕ ಮೂಲದ ಶಿಕ್ಷಕರಿಗೆ ಸಾಂಪ್ರದಾಯಿಕ ಶಾಲೊದಿಸಿ, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕನ್ನಡದ ಕಂಪು: ಡಾ. ಪುರುಷೋತ್ತಮ ಬಿಳಿಮಲೆ ಅವರು ವಿದೇಶದಲ್ಲೂ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡಿರುವ ಕನ್ನಡಿಗರ ಶ್ರಮವನ್ನು ಶ್ಲಾಘಿಸಿದರು. ಮಕ್ಕಳ ಗಾಯನ, ಫೈಸಲ್ ಅಲ್-ದೋಸಾರಿ ಅವರ ಗಿಟಾರ್ ವಾದನ ಸಭಿಕರನ್ನು ರಂಜಿಸಿತು.

    ಕಾರ್ಯಕ್ರಮದಲ್ಲಿ ಪ್ರಮುಖ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅಂಶು ಜೈನ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು.

    About The Author

    error: Content is protected !!