September 12, 2026

ನ್ಯಾಯಬೆಲೆ ಅಂಗಡಿ ಮುಂದೆ ತಾಸುಗಟ್ಟಲೇ ಕಾಯುವ ಪಡಿತರದಾರರು: ಭಟ್ಕಳದಲ್ಲಿ ಸರ್ವರ್ ಸಮಸ್ಯೆಗೆ ಪರಿಹಾರ ಯಾವಾಗ?

ಭಟ್ಕಳ: ಪಡಿತರ ಪಡೆಯಲು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದ ಪಡಿತರದಾರರಿಗೆ ಇದೀಗ ಕುಟುಂಬಸ್ಥರ ಇ-ಕೆವೈಸಿ (e-KYC) ಮಾಡಿಸಿಕೊಳ್ಳುವ ಹೊಸ ಸಂಕಷ್ಟ ಎದುರಾಗಿದ್ದು, ತಾಂತ್ರಿಕ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ ಪರದಾಡುವಂತಾಗಿದೆ.

ಸರ್ವರ್ ಒತ್ತಡ ಹಾಗೂ ಜಂಜಾಟ: ಆಗಸ್ಟ್-ಸೆಪ್ಟೆಂಬರ್ ತಿಂಗಳ ಪಡಿತರ ವಿತರಣೆ ಮತ್ತು ಕುಟುಂಬದ ಸದಸ್ಯರ ಕೆವೈಸಿ ಪ್ರಕ್ರಿಯೆ ಏಕಕಾಲಕ್ಕೆ ನಡೆಯುತ್ತಿರುವುದರಿಂದ ಸರ್ವರ್ ಮೇಲೆ ಭಾರಿ ಒತ್ತಡ ಉಂಟಾಗಿದೆ. ಒಬ್ಬ ಸದಸ್ಯರ ಕೆವೈಸಿ ಪೂರ್ಣಗೊಳ್ಳಲು 15ರಿಂದ 20 ನಿಮಿಷ ಸಮಯ ತಗುಲುತ್ತಿದ್ದು, ಕೆಲಸ-ಕಾರ್ಯ ಬಿಟ್ಟು ಬಂದ ಬಡ ಹಾಗೂ ಮಧ್ಯಮ ವರ್ಗದ ಜನರು ದಿನವಿಡೀ ಕಾಯಬೇಕಾಗಿದೆ.

ಗಡುವು ಹಾಗೂ ಅಂಗಡಿಕಾರರ ಸಂಕಷ್ಟ: ಸೆಪ್ಟೆಂಬರ್ 30ರೊಳಗೆ ಕೆವೈಸಿ ಪೂರ್ಣಗೊಳಿಸಬೇಕು ಎಂಬ ಗಡುವು ಜನರಲ್ಲಿ ಆತಂಕ ಮೂಡಿಸಿದೆ. ಈ ಹಿಂದೆ ಪಡಿತರ ವಿತರಣೆಯಲ್ಲೂ ಸರ್ವರ್ ಕೈಕೊಟ್ಟು ಸಾರ್ವಜನಿಕರ ಆಕ್ರೋಶ ಎದುರಿಸಿದ್ದ ನ್ಯಾಯಬೆಲೆ ಅಂಗಡಿಕಾರರಿಗೆ, ಈಗ ಕೆವೈಸಿಯ ಹೆಚ್ಚುವರಿ ಹೊರೆಯೂ ಬಿದ್ದಿದೆ.

ಸಾರ್ವಜನಿಕರ ಆಗ್ರಹ: ತಾಂತ್ರಿಕ ಸಮಸ್ಯೆಗೆ ಸಾರ್ವಜನಿಕರನ್ನು ಹೊಣೆ ಮಾಡುವುದು ಸರಿಯಲ್ಲ. ಕೆವೈಸಿ ಪ್ರಕ್ರಿಯೆಯನ್ನು ಕೇವಲ ರೇಷನ್ ಅಂಗಡಿಗಳಿಗೆ ಸೀಮಿತಗೊಳಿಸದೆ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಸೈಬರ್ ಸೆಂಟರ್‌ಗಳಿಗೂ ವಿಸ್ತರಿಸಿ, ಕನಿಷ್ಠ ಎರಡು ತಿಂಗಳ ಕಾಲಾವಕಾಶ ನೀಡಬೇಕು ಎಂದು ಪಡಿತರದಾರರು ಒತ್ತಾಯಿಸಿದ್ದಾರೆ.

    ಆಹಾರ ಇಲಾಖೆಯು ತಕ್ಷಣವೇ ಹೆಚ್ಚಿನ ಸಾಮರ್ಥ್ಯದ ಸರ್ವರ್ ವ್ಯವಸ್ಥೆ ಕಲ್ಪಿಸದಿದ್ದರೆ ಪಡಿತರ ವಿತರಣೆ ಹಾಗೂ ಕೆವೈಸಿ ಕಡ್ಡಾಯದ ವಿರುದ್ಧ ಸಾರ್ವಜನಿಕರ ಆಕ್ರೋಶ ತೀವ್ರಗೊಳ್ಳುವ ಸಾಧ್ಯತೆಯಿದೆ.

    About The Author

    error: Content is protected !!