September 21, 2026

ಅಂತರ್ಜಲ ವೃದ್ಧಿಗೆ ನದಿ ಕಟ್ಟು: ಭಟ್ಕಳದಲ್ಲಿ 50ಕ್ಕೂ ಅಧಿಕ ಮಂದಿಯಿಂದ ಶ್ರಮದಾನ

ಭಟ್ಕಳ: ತಾಲೂಕಿನ ರೈಲ್ವೆ ನಿಲ್ದಾಣ ಸಮೀಪದ ಶ್ರೀ ನಾಗ ಮಾಸ್ತಿ ಕ್ಷೇತ್ರದ ಎದುರಿನ ನದಿಗೆ ಸಾರ್ವಜನಿಕರು ಶ್ರಮದಾನದ ಮೂಲಕ ಕಟ್ಟು ನಿರ್ಮಿಸಿ, ಜಲ ಸಂವರ್ಧನಾ ಕಾರ್ಯ ಕೈಗೊಂಡಿದ್ದಾರೆ.

ಪ್ರತಿವರ್ಷ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ನಡೆಸಲಾಗುತ್ತಿದ್ದ ಈ ಕಟ್ಟು ಕಟ್ಟುವ ಕಾರ್ಯವನ್ನು, ಈ ಬಾರಿ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿಯುತ್ತಿರುವುದನ್ನು ಗಮನಿಸಿ ಎರಡು ತಿಂಗಳು ಮುಂಚಿತವಾಗಿಯೇ ಕೈಗೊಳ್ಳಲಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮರುಪೂರಣಗೊಳ್ಳಲು ಅನುಕೂಲವಾಗಲಿದೆ.

ವಿವಿಧ ಸಂಘಟನೆಗಳ ಒಕ್ಕೂಟ: ನಾಗ ಮಾಸ್ತಿ ಸೇವಾ ಸಮಿತಿಯ ಅಧ್ಯಕ್ಷ ಲೋಕೇಶ್ ನಾಯ್ಕ, ಉಪಾಧ್ಯಕ್ಷ ಮಹಾಬಲೇಶ್ವರ ನಾಯ್ಕ ಹಾಗೂ ಮಂಜು ನಾಯ್ಕ ಅವರ ನೇತೃತ್ವದಲ್ಲಿ ಮುಟ್ಟಳ್ಳಿ-ಮೂಡಭಟ್ಕಳ ಭಾಗದ 50ಕ್ಕೂ ಹೆಚ್ಚು ಕ್ರಿಯೇಟಿವ್ ಫ್ರೆಂಡ್ಸ್ ತಂಡದ ಸದಸ್ಯರು, ನಾಗ ಮಾಸ್ತಿ ಅಭಿವೃದ್ಧಿ ಸಮಿತಿ, ಟ್ರಸ್ಟ್, ಯೋಗ ಸಮಿತಿ ಹಾಗೂ ಭಕ್ತವೃಂದ ಶ್ರಮದಾನದಲ್ಲಿ ಪಾಲ್ಗೊಂಡರು.

ಆವರಣ ನೈರ್ಮಲ್ಯ ಹಾಗೂ ಕೃತಜ್ಞತೆ: ಇದೇ ವೇಳೆ ಮುಂಬರುವ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ನಾಗ ಮಾಸ್ತಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಶ್ರಮದಾನದಲ್ಲಿ ಭಾಗವಹಿಸಿದ ಸಮಸ್ತ ನಾಗರಿಕರಿಗೆ ನಾಗ ಮಾಸ್ತಿ ಟ್ರಸ್ಟ್ ಅಧ್ಯಕ್ಷ ಸತೀಶ್ ಕುಮಾರ್ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಅರುಣ್ ನಾಯ್ಕ ಚೌತನಿ, ಪಾಂಡು ನಾಯ್ಕ ಆಸರ್ಕೇರಿ, ರವಿ ನಾಯಕ ಮಣ್ಕುಳಿ, ಜಲ ಸಂವರ್ಧನಾ ಸಮಿತಿಯ ಹಿರಿಯ ಸದಸ್ಯರಾದ ಆರ್. ಬಾಳೇರಿ ದಂಪತಿ, ರವಿ ಆಚಾರಿ, ರಾಮನಾಥ ಬಳೆಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!