November 22, 2026

2005ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರ ಹಿತರಕ್ಷಣೆಗೆ ಸರ್ಕಾರ ಮಧ್ಯಪ್ರವೇಶಿಸಲಿ

ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರಿಗೆ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ನಿಯೋಗದಿಂದ ಮನವಿ; ಕಾರವಾರದಲ್ಲಿ ಉನ್ನತಾಧಿಕಾರ ಸಂವಾದ ಸಭೆಗೆ ಆಗ್ರಹ

ಯಲ್ಲಾಪುರ (ಉತ್ತರ ಕನ್ನಡ): ವಸತಿ ಮತ್ತು ಜೀವನೋಪಾಯಕ್ಕಾಗಿ 2005ರ ಪೂರ್ವದಿಂದ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಬಡ ಕುಟುಂಬಗಳ ಹಿತರಕ್ಷಿಸಲು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಚಂದ್ರಕಾಂತ ಕೊಚರೇಕರ ನೇತೃತ್ವದ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರನ್ನು ಆಗ್ರಹಿಸಿದೆ.

ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಜಿ.ಎಂ. ಶೆಟ್ಟಿ ಅಚವೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ನಾಯ್ಕ ಅವರ ನೇತೃತ್ವದ ನಿಯೋಗವು ಶನಿವಾರ ಯಲ್ಲಾಪುರದಲ್ಲಿ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ ಈ ಕುರಿತು ಸುದೀರ್ಘ ಮನವಿ ಪತ್ರ ಸಲ್ಲಿಸಿತು.

ನಿಯೋಗದ ಪ್ರಮುಖ ಬೇಡಿಕೆಗಳು:

ಉನ್ನತಾಧಿಕಾರ ಸಂವಾದ ಸಭೆ: ಜಿಲ್ಲೆಯ 2005ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರ ಅತಿಕ್ರಮಣವನ್ನು ಸಕ್ರಮಗೊಳಿಸುವಲ್ಲಿ ಇರುವ ಗೊಂದಲಗಳನ್ನು ಬಗೆಹರಿಸಲು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಹೋರಾಟ ಪ್ರಮುಖರೊಂದಿಗೆ ಉನ್ನತಾಧಿಕಾರ ಮಟ್ಟದ ಸಂವಾದ ಸಭೆ ಆಯೋಜಿಸಬೇಕು.

ಅರ್ಜಿಗಳ ಮರುಪರಿಶೀಲನೆ: ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆಯ ಮೂಲಕ ಅರ್ಹ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡಲು ಜಿಲ್ಲಾ ಮಟ್ಟದಲ್ಲಿ ಎದುರಾಗಿರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಬೇಕು.

ಕಾಯ್ದೆ ಸರಳೀಕರಣ: ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಸರಳೀಕರಣಕ್ಕೆ ತಿದ್ದುಪಡಿ ಸೂಚಿಸಿರುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಅಂಗೀಕಾರ ಪಡೆಯಲು ಪರಸ್ಪರ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

    ಅರಣ್ಯವಾಸಿಗಳ ಬದುಕು ಅತಂತ್ರ: “ಶೇ. 82ರಷ್ಟು ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರ್ಹ ಅರಣ್ಯ ಭೂಮಿ ಸಾಗುವಳಿದಾರರಿಗೆ ಅಧಿಭೋಗದ ಹಕ್ಕು ನೀಡುವಲ್ಲಿ ಅನಗತ್ಯವಾಗಿ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಇನ್ನೊಂದೆಡೆ ಅರಣ್ಯ ಹಕ್ಕು ಕ್ಲೇಮುದಾರರಿಗೆ ಕಿರುಕುಳ ನೀಡಲಾಗುತ್ತಿದೆ. ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಸಮಸ್ಯೆ ಬಗೆಹರಿಯದೆ ಲಕ್ಷಾಂತರ ಬಡ ಕುಟುಂಬಗಳ ಬದುಕು ಅತಂತ್ರವಾಗಿದೆ” ಎಂದು ನಿಯೋಗವು ಸಚಿವರ ಗಮನಕ್ಕೆ ತಂದಿತು.

    ಅಲ್ಲದೆ, 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ 1978ರ ಪೂರ್ವದ ಒತ್ತುವರಿಗಳನ್ನು ಸಕ್ರಮಗೊಳಿಸುವ ಸಂದರ್ಭದಲ್ಲಿ ಕೈಬಿಟ್ಟುಹೋಗಿರುವ ಸಾವಿರಾರು ಅರ್ಹ ಪ್ರಕರಣಗಳನ್ನು ಮರುಸಮೀಕ್ಷೆ ನಡೆಸಿ ಮಂಜೂರಾತಿಗೆ ಪರಿಗಣಿಸಲು ಸರ್ಕಾರ 2015ರ ಮಾರ್ಚ್ 13ರಂದು ಸುತ್ತೋಲೆ (ಸಂಖ್ಯೆ: ಅಪಜೀ: 45: ಎಫ್‌ಜಿಎಲ್. 2015) ಹೊರಡಿಸಿ ನಡವಳಿ ಸ್ವೀಕರಿಸಿದ್ದರೂ, ಸಂಬಂಧಪಟ್ಟ ಇಲಾಖೆಯು ಈವರೆಗೆ ಅಧಿಕೃತ ಆದೇಶ ಹೊರಡಿಸದೆ ಇರುವುದರಿಂದ ಜಿಲ್ಲೆಯ ಜನರಿಗೆ ಅನ್ಯಾಯವಾಗಿದೆ. ತಕ್ಷಣವೇ ಅಧಿಕೃತ ಆದೇಶ ಹೊರಬೀಳುವಂತೆ ಸರ್ಕಾರದ ಮೇಲೆ ಪ್ರಭಾವ ಬೀರಬೇಕು ಎಂದು ನಿಯೋಗ ಮನವಿ ಮಾಡಿತು.

    ಇದೇ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರೊಂದಿಗೂ ನಿಯೋಗವು ಸುದೀರ್ಘವಾಗಿ ಚರ್ಚಿಸಿ, ಜಿಲ್ಲೆಯ ಈ ಜ್ವಲಂತ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ತರುವಂತೆ ಕೋರಿತು.

    ನಿಯೋಗದಲ್ಲಿ ಹೋರಾಟ ಸಮಿತಿಯ ರಮಾನಂದ ನಾಯ್ಕ ಅಚವೆ, ರಾಮದಾಸ ಎಚ್. ನಾಯಕ, ನಾಗಯ್ಯ ಸೇರುಗಾರ, ಶಂಕರ ಕೊಡಿಯಾ, ರಘುಪತಿ ಹೆಬ್ಬಾರ, ನಾರಾಯಣ ಮುಕ್ತಿ, ಮಹಾಬಲ ಶೇರುಗಾರ, ಮಹದೇವ ನಾಯ್ಕ, ಮಂಜುನಾಥ ಶಾಸ್ತ್ರಿ ಹಾಗೂ ರಘು ಮರಾಠಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

    About The Author

    error: Content is protected !!