ಭಾಗಮಂಡಲ: ಕೊಡಗಿನ ಮೂಲನಿವಾಸಿಗಳ ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ, ನೆಲ-ಜಲ, ದೇವಕಾಡು ಹಾಗೂ ಶ್ರೀ ಇಗ್ಗುತಪ್ಪ ದೇವರು ನೆಲೆನಿಂತಿರುವ ಪವಿತ್ರ ಮಲ್ಯ (ಮಲ್ಮ) ಬೆಟ್ಟವನ್ನು ಸಂರಕ್ಷಿಸುವ ಉದ್ದೇಶದಿಂದ ಅನಿವಾಸಿ ಭಾರತೀಯ ಬಲ್ಯಾಂಡ ಕವೇರ ಪೂಣಚ್ಚ ಅವರ ನೇತೃತ್ವದಲ್ಲಿ ‘ಕೊಡಗು ಶಕ್ತಿ ನಡ್ಪು’ ಬೃಹತ್ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.
ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ದೇಶ ತಕ್ಕರಾದ ಪರದಂಡ ಪ್ರಿನ್ಸ್ ಅವರ ನೇತೃತ್ವದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ವಿವಿಧ ಕ್ಷೇತ್ರಗಳಿಗೆ ಭೇಟಿ: ಭಾಗಮಂಡಲ ಹಾಗೂ ಅಯ್ಯಂಗೇರಿ ಮಾರ್ಗವಾಗಿ ಸಾಗಿದ ಪಾದಯಾತ್ರೆಯನ್ನು ಪುಲಿಕೋಟು ಗ್ರಾಮದಲ್ಲಿ ಕರವಂಡ, ಪೆಬ್ಬಟ್ಟಿರ, ಮುಕ್ಕಾಟಿರ ಹಾಗೂ ಮಣವಟ್ಟಿರ ಕುಟುಂಬಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಪೇರೂರು ಶ್ರೀ ಇಗ್ಗುತಪ್ಪ ದೇವಾಲಯ, ನೆಲಜಿ ಶ್ರೀ ಇಗ್ಗುತಪ್ಪ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಅಂತಿಮವಾಗಿ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನ ತಲುಪಿ ಪಾದಯಾತ್ರೆ ಸಮಾರೋಪಗೊಂಡಿತು.
ಸಂಸ್ಕೃತಿ ಜಾಗೃತಿ: ಪಾದಯಾತ್ರೆಯುದ್ದಕ್ಕೂ ಚೋಕಿರ ಅನಿತಾ ಹಾಗೂ ಮಾಳೇಟಿರ ಶ್ರೀನಿವಾಸ್ ಅವರು ಕೊಡಗಿನ ಪ್ರಕೃತಿ, ಸಂಸ್ಕೃತಿ ಮತ್ತು ದೇವಕಾಡುಗಳ ಸಂರಕ್ಷಣೆಯ ಜಾಗೃತಿ ಮೂಡಿಸಿದರು.

ಸಂಘ-ಸಂಸ್ಥೆಗಳ ಬೆಂಬಲ: ಜನ್ಮಭೂಮಿ ಚಾರಿಟೇಬಲ್ ಟ್ರಸ್ಟ್, ಕನೆಕ್ಟಿಂಗ್ ಕೊಡವಾಸ್, ವಿರಾಜಪೇಟೆ ಮತ್ತು ಪೊನ್ನಂಪೇಟೆ ಕೊಡವ ಸಮಾಜ, ವಿರಾಜಪೇಟೆ ಪೊಮ್ಮಕ್ಕಡ ಕೂಟ, ತಿಂಗಕೋರ್ ಮೊಟ್ ತಂಡ, ಚೇರಂಬಾಣೆ ಕೊಡವ ಸಮಾಜ, ನಾಪೋಕ್ಲು ಭಗವತಿ ಸಂಘ ಹಾಗೂ ಆದಿ ಬೈತೂರು ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೂರಾರು ಕೊಡವ ಬಂಧುಗಳು ಭಾಗವಹಿಸಿದ್ದರು.
(ವರದಿ: ಪ್ರಿತುನ್ ಪೂವಣ್ಣ)
About The Author


More Stories
ಶ್ರದ್ಧಾ ಭಕ್ತಿಯಿಂದ ನೆರವೇರಿದ ಆಜ್ಞಾ ಮುಹೂರ್ತ – ಕಾವೇರಿ ತುಲಾ ಸಂಕ್ರಮಣ ಹಾಗೂ ತೀರ್ಥೋದ್ಭವಕ್ಕೆ ಸಿದ್ಧತೆ