ಭಟ್ಕಳ: ತಾಲೂಕಿನ ಶಿರಾಲಿ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವೈದ್ಯರ ಸಂಘ ದೂರು ನೀಡಿದ್ದರೆ, ಇನ್ನೊಂದೆಡೆ ಮಗುವಿನ ಸಂಬಂಧಿಕರು ಪ್ರತಿದೂರು ನೀಡಿದ್ದಾರೆ.
ಶಿರಾಲಿಯ ದಂಪತಿಯ ಎರಡನೇ ಮಗು ಅಕ್ಟೋಬರ್ ೨೭ರಂದು ಜನಿಸಿತ್ತು. ಜಾಂಡೀಸ್ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ತಾಯಿ ಹಾಲುಣಿಸುತ್ತಿದ್ದ ಸಂದರ್ಭದಲ್ಲಿ ಮಗು ನೀಲಿ ಬಣ್ಣಕ್ಕೆ ತಿರುಗಿ ಉಸಿರಾಟದ ತೊಂದರೆ ಅನುಭವಿಸಿದಾಗ ಶಿಶು ವೈದ್ಯರು ತಕ್ಷಣ ಪರಿಶೀಲಿಸಿ ಚಿಕಿತ್ಸೆ ನೀಡಿದರಾದರೂ, ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
ವೈದ್ಯರ ಮೇಲೆ ಹಲ್ಲೆ – ಐಎಂಎ ಖಂಡನೆ: ಮಗುವಿನ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಶಿಶು ವೈದ್ಯ ಲೀಲಾಧರ ಮೊಗೇರ ಹಾಗೂ ತರಬೇತಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಕುರಿತು ವೈದ್ಯ ಲೀಲಾಧರ ಮೊಗೇರ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೈದ್ಯರ ಮೇಲಿನ ಹಲ್ಲೆಯನ್ನು ಕರ್ನಾಟಕ ಸರ್ಕಾರಿ ವೈದ್ಯರ ಸಂಘ (ಬೆಂಗಳೂರು) ಭಾರತೀಯ ವೈದ್ಯಕೀಯ ಸಂಘ (IMA) ತೀವ್ರವಾಗಿ ಖಂಡಿಸಿವೆ.
ಪೊಲೀಸ್ ದೂರು ಹಾಗೂ ತನಿಖೆ: ಇನ್ನೊಂದೆಡೆ ವೈದ್ಯರ ಆಜಾಗರೂಕತೆಯಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಸಂಬಂಧಿಕರು ಸಹ ಪೊಲೀಸರಿಗೆ ದೂರು ನೀಡಿದ್ದಾರೆ. ಮಗುವಿನ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

About The Author


More Stories
ವೈದ್ಯರಿಗೆ ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ‘ಸಿಎಂಇ’ ಕಾರ್ಯಾಗಾರ
ಭಗವದ್ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲ ಸಮಸ್ಯೆಗಳನ್ನೂ ಎದುರಿಸಬಹುದು: ರಾಜೇಶ ನಾಯಕ
ಭಟ್ಕಳದಲ್ಲಿ ನಾಲ್ಕನೇ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಿಲಾನ್ಯಾಸ