ವಿರಾಜಪೇಟೆ: ಪವಿತ್ರ ಕಾವೇರಿ ತೀರ್ಥೋದ್ಭವದ ನಂತರ ತುಲಾ ಮಾಸದ ಹತ್ತನೇ ದಿನದಂದು ಆಚರಿಸಲಾಗುವ ಪ್ರಸಿದ್ಧ ‘ಪತ್ತಲೋದಿ ಆರಾಧನೋತ್ಸವ’ವು ಕೊಡಗಿನ ಕುಲದೇವರಾದ ಕಕ್ಕಬ್ಬೆಯ ಪಾಡಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು.

ಪರದಂಡ ಕುಟುಂಬಸ್ಥರ ಮುಖಂಡತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಈ ಪವಿತ್ರ ಉತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಅರ್ಚಕ ಜಗದೀಶ್ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು.
ವಿಶೇಷ ಪೂಜೆ ಹಾಗೂ ತುಲಾಭಾರ ಸೇವೆ: ಉತ್ಸವದ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಹಾಗೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತುಲಾಭಾರ ಸೇವೆಗಳನ್ನು ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಡೆದ ದೇವರ ನೃತ್ಯ ಪ್ರದರ್ಶನವು ಭಕ್ತರ ಗಮನ ಸೆಳೆಯಿತು. ಬಳಿಕ ಮಹಾ ಅನ್ನಸಂತರ್ಪಣೆ ಜರುಗಿತು. ಕಕ್ಕಬ್ಬೆಯ ಪಾಡಿ ದೇವಾಲಯವಲ್ಲದೆ, ಪೆರೂರು ಹಾಗೂ ನೆಲಜಿ ಗ್ರಾಮಗಳ ಶ್ರೀ ಇಗ್ಗುತ್ತಪ್ಪ ದೇವಾಲಯಗಳಲ್ಲೂ ಪತ್ತಲೋದಿ ಉತ್ಸವವು ವಿಜೃಂಭಣೆಯಿಂದ ನೆರವೇರಿತು.
ನಾಡಿನ ಸುಭಿಕ್ಷೆಗೆ ಪ್ರಾರ್ಥನೆ: ಅಖಿಲ ಕೊಡವ ಸಮಾಜದ ಹಾಗೂ ಭಕ್ತ ಜನ ಸಂಘದ ಅಧ್ಯಕ್ಷ, ದೇಶತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ದೇವರ ಸನ್ನಿಧಿಯಲ್ಲಿ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, “ಪತ್ತಲೋದಿ ದಿನವು ಇಗ್ಗುತ್ತಪ್ಪ ದೇವರ ಆರಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರ ದಿನ. ಇಗ್ಗುತ್ತಪ್ಪ ದೇವರು ನಾಡಿನ ಸಕಲ ಭಕ್ತರಿಗೂ ಆಯುರಾರೋಗ್ಯ, ಸುಖ-ಶಾಂತಿ ನೀಡಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ಪಾರು ಪತ್ತೇಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ವ್ಯವಸ್ಥಾಪನ ಸಮಿತಿ ಹಾಗೂ ಭಕ್ತ ಜನ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು ಮತ್ತು ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. (ವರದಿ: ಪ್ರಿತುನ್ ಪೂವಣ್ಣ)
About The Author


More Stories
ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ 83ನೇ ವಾರ್ಷಿಕ ಮಹಾಸಭೆ: ಶೇ 25 ಡಿವಿಡೆಂಡ್ ನೀಡಲು ಸಮ್ಮತಿ
ಮಡಿಕೇರಿ: ಸಂಚಾರಿ ಪೊಲೀಸರಿಗೆ ಉಚಿತ ರಿಫ್ಲೆಕ್ಟರ್ ಜಾಕೆಟ್ ವಿತರಣೆ, ಆರೋಗ್ಯ ತಪಾಸಣಾ ಶಿಬಿರ
ಕೊಡಗಿನ ಪ್ರಸಿದ್ಧ ಗೋಣಿಕೊಪ್ಪ ದಸರಾ ಉತ್ಸವ: 48ನೇ ಸಾಲಿನ ಲಾಂಛನ ಬಿಡುಗಡೆಗೊಳಿಸಿದ ಶಾಸಕ ಪೊನ್ನಣ್ಣ