November 26, 2026

ಶುಕ್ರವಾರದಿಂದ ಮೂರು ದಿನ ರಾಜ್ಯಮಟ್ಟದ ಹೊನಲು ಬೆಳಕಿನ ‘ಗಂಡು-ಬೇರುಂಡ’ ಕಬಡ್ಡಿ ಹಬ್ಬ

10 ಜಿಲ್ಲೆಗಳ ತಂಡಗಳ ಸೆಣಸಾಟ; ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ. ರಮೇಶ್ ಆಗಮನ ವಿಶೇಷ ಆಕರ್ಷಣೆ; ಜಿಲ್ಲಾ ತಂಡದಲ್ಲಿ ಭಟ್ಕಳದ ನಾಲ್ವರು ಆಟಗಾರರು

ಭಟ್ಕಳ (ಉತ್ತರ ಕನ್ನಡ): ಪ್ರತಿಷ್ಠಿತ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆತಿಥ್ಯ ವಹಿಸಲು ಕರಾವಳಿ ನಗರಿ ಭಟ್ಕಳ ಸಕಲ ರೀತಿಯಲ್ಲಿ ಸಜ್ಜಾಗಿದೆ. ಪಟ್ಟಣದ ಐಸ್ ಫ್ಯಾಕ್ಟರಿ ಸಮೀಪದ ಕೆ.ಪಿ. ಮೈದಾನದಲ್ಲಿ ನವೆಂಬರ್ 27ರಿಂದ 29ರವರೆಗೆ ಮೂರು ದಿನಗಳ ಕಾಲ ಹೊನಲು ಬೆಳಕಿನ ರಾಜ್ಯಮಟ್ಟದ ‘ಗಂಡು-ಬೇರುಂಡ’ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ರಾಜ್ಯದ ಹತ್ತು ಜಿಲ್ಲೆಗಳ ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ಇವೆಂಟ್ ಸ್ಪೋರ್ಟ್ಸ್ ಕಾರ್ಪೊರೇಷನ್ ಹಾಗೂ ಜಿಲ್ಲಾ ಮತ್ತು ತಾಲೂಕು ಕಬಡ್ಡಿ ಅಸೋಸಿಯೇಷನ್‌ಗಳ ಸಂಯುಕ್ತ ಆಶ್ರಯದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಕೆ.ಪಿ. ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಂದ್ಯಾವಳಿ ಸಮಿತಿಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾಹಿತಿ ನೀಡಿ, ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಹಾಗೂ ಬೀನಾ ವೈದ್ಯ ಅವರು ಪ್ರಾಯೋಜಕರಾಗಿ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಉದ್ಘಾಟನೆ ಹಾಗೂ ಗಣ್ಯರ ಉಪಸ್ಥಿತಿ: ನವೆಂಬರ್ 27ರಂದು ಸಂಜೆ 4.30ಕ್ಕೆ ಪ್ರಾರ್ಥನೆಯೊಂದಿಗೆ ಪಂದ್ಯಗಳಿಗೆ ಚಾಲನೆ ದೊರೆಯಲಿದ್ದು, ರಾತ್ರಿ 8.30ರವರೆಗೆ ಪಂದ್ಯಗಳು ನಡೆಯಲಿವೆ. ಬಳಿಕ ಅಧಿಕೃತ ಉದ್ಘಾಟನಾ ಸಮಾರಂಭ ಜರುಗಲಿದೆ. ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಕಾರವಾರ ಶಾಸಕ ಸತೀಶ್ ಸೈಲ್, ಶಾಸಕ ಮುಹಿದ್ದೀನ್ ಬಾವಾ, ಜಿಲ್ಲಾಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಮೌಲಾನ ಅಜೀಜುರ್ ರೆಹಮಾನ್ ಸಾಹೇಬ್, ಮುಸ್ಲಿಂ ಫೆಡರೇಶನ್ ಅಧ್ಯಕ್ಷರು, ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್ ಹಾಗೂ ಭಟ್ಕಳ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಇಮ್ರಾನ್ ಲಂಕಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪ್ರೊ ಕಬಡ್ಡಿ ತಾರೆ ಬಿ.ಸಿ. ರಮೇಶ್ ಪ್ರಮುಖ ಆಕರ್ಷಣೆ: ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ಪ್ರೊ ಕಬಡ್ಡಿಯ ಖ್ಯಾತ ಆಟಗಾರ ಬಿ.ಸಿ. ರಮೇಶ್ ಅವರ ಆಗಮನ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿದೆ. ಇವರೊಂದಿಗೆ ಬಿ.ಸಿ. ಸುರೇಶ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಚಲುವರಾಜ್, ಶಣ್ಮುಗ ಮುನಿರಾಜು ಹಾಗೂ ಗೌರೀಶ್ ಸೇರಿದಂತೆ ರಾಜ್ಯದ ಪ್ರಮುಖ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಜಿಲ್ಲಾ ತಂಡದಲ್ಲಿ ಭಟ್ಕಳದ ನಾಲ್ವರು ಪ್ರತಿಭೆಗಳು: ಉತ್ತರ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಲು ಭಟ್ಕಳದ ವಿನೋದ್ ನಾಯ್ಕ, ರಂಜಿತ್ ನಾಯ್ಕ, ರತನ್ ನಾಯ್ಕ ಹಾಗೂ ಸುಶೀಲ್ ಕಾಮ್ರೇಕರ್ ಆಯ್ಕೆಯಾಗಿದ್ದಾರೆ. ಹತ್ತು ಜಿಲ್ಲೆಗಳ ತಂಡಗಳ ಜೊತೆಗೆ ಭಟ್ಕಳದ ನಾಲ್ಕು ಸ್ಥಳೀಯ ತಂಡಗಳಿಗೂ ಆಡಲು ಅವಕಾಶ ಕಲ್ಪಿಸಲಾಗಿದ್ದು, ಸ್ಥಳೀಯ ಯುವಕರಿಗೆ ಅನುಭವಿ ಆಟಗಾರರೊಂದಿಗೆ ಸೆಣಸಾಡುವ ವೇದಿಕೆ ಸಿಗಲಿದೆ. ಈ ಪಂದ್ಯಾವಳಿಯಿಂದ ಅಗ್ರ ನಾಲ್ಕು ತಂಡಗಳು ಬೆಂಗಳೂರು ಅಥವಾ ಮಂಗಳೂರಿನಲ್ಲಿ ನಡೆಯಲಿರುವ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿವೆ ಎಂದು ಇನಾಯತುಲ್ಲಾ ಶಾಬಂದ್ರಿ ವಿವರಿಸಿದರು.

ಗ್ರಾಮೀಣ ಪ್ರತಿಭೆಗಳಿಗೆ ಪ್ರೊ ಕಬಡ್ಡಿ ವೇದಿಕೆಯ ಗುರಿ: “ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಹತ್ತು ಜಿಲ್ಲೆಗಳ ಆಟಗಾರರ ವೈಯಕ್ತಿಕ ವಿವರ, ಆಟದ ಅಂಕಿ-ಅಂಶ ಹಾಗೂ ಪಂದ್ಯಗಳ ವಿಡಿಯೋ ದಾಖಲೆಗಳನ್ನು ಸಂಗ್ರಹಿಸಿ, ಪ್ರೊ ಕಬಡ್ಡಿ ಸೇರಿದಂತೆ ಉನ್ನತ ಮಟ್ಟದ ವೇದಿಕೆಗಳಲ್ಲಿ ಅವಕಾಶ ದೊರಕಿಸಲು ಪ್ರಯತ್ನಿಸಲಾಗುವುದು” ಎಂದು ಆಯೋಜಕರು ತಿಳಿಸಿದರು.

ನವೆಂಬರ್ 28ರಂದು ವಿಶೇಷ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ನವೆಂಬರ್ 29ರ ಸಮಾರೋಪ ಸಮಾರಂಭದಲ್ಲಿ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ, ಶಾಸಕ ದಿನಕರ ಶೆಟ್ಟಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ನಾಮಧಾರಿ ಸಮಾಜದ ನೂತನ ಅಧ್ಯಕ್ಷ ನಾಗೇಂದ್ರ ನಾಯ್ಕ ಹಾಗೂ ಹ್ಯಾಂಗ್ಲೋ ಐಸ್ ಕ್ರೀಮ್ ಸಂಸ್ಥೆಯ ನಿರ್ದೇಶಕ ಪ್ರದೀಪ್ ಪೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕಬಡ್ಡಿ ಅಸೋಸಿಯೇಷನ್ ಪ್ರಮುಖ ಶ್ರೀಧರ ನಾಯ್ಕ ಮುಟ್ಟಳ್ಳಿ ಮಾತನಾಡಿ, ಜಿಲ್ಲೆಯ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಭಟ್ಕಳದ ಶಾಹೀನ್ ಕ್ಲಬ್ ವತಿಯಿಂದ ಮುಂದಿನ ದಿನಗಳಲ್ಲಿ ನಾಲ್ಕು ಜಿಲ್ಲೆಗಳ ತಂಡಗಳನ್ನೊಳಗೊಂಡ ಮತ್ತೊಂದು ಪಂದ್ಯಾವಳಿ ಆಯೋಜಿಸುವ ಕುರಿತು ಘೋಷಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಇಂಶಾದ್, ಅಜೀಜು ರೆಹಮಾನ್, ಅಬ್ದುಲ್ ರವೂಫ್, ಜಾಫರ್, ಪ್ರಕಾಶ್ ನಾಯ್ಕ, ದಿನೇಶ್ ಗವಾಳಿ, ಆದಮ್ ಪಣಬುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!